ಹಾಳೆ - ಒಂದು :-
''ಏನಾದ್ರೂ ಬರೆ ಆದ್ರೆ ಚೆನ್ನಾಗಿ ಬರೆ ; ಬರೆಯೋದು ಒಂದು ಕಲೆ '' ಅಂತ ನಮ್ತಂದೆ ನಂಗೆ ಯಾವಾಗಲೂ ಹೇಳ್ತಿದ್ದರು. ನನ್ನ ಚೂರು ಪಾರು ಬರವಣಿಗೆಗೆ ನಮ್ತಂದೆ ನನ್ ಬಗ್ಗೆ ತೋರಿಸ್ತಿದ್ದ ಪ್ರೀತಿ, ಮುತುವರ್ಜಿ, ಕಾಳಜಿ, ಅವರು ಹುರಿದುಂಬಿಸುತ್ತಿದ್ದ ಪರಿ ನಾನು ಬರೆಯುವಾಗಲ್ಲೆಲ್ಲ ಅವರು ನನ್ನೊಂದಿಗೆ ಇದ್ದಾರೆ ಎಂಬ ನನ್ನ ಒಳ ಮನಸ್ಸಿನ ಆ ಚಿಂತನೆಗೆ ನಾನು ಮೆಚ್ಚಲೇ ಬೆಕು. ಯಾಕೆಂದರೆ ಈಗ ನನ್ನ ತಂದೆ ನಮ್ಮೊo ದಿಗಿಲ್ಲ ಆದರೂ ಅವರ ಆ ನೆನಪು ನನ್ನ ಬರವಣಿಗೆಗೆ ಈಗಲೂ ತುಂಬಾ ಸಹಾಯಕವಾಗ್ತಾ ಇದೆ. ನನ್ನನ್ನು ತಿದ್ದಿ ತೀಡಿ ಒಳ್ಳೆ ಸಂಸ್ಕಾರ , ಗುರು ಹಿರಿಯರಲ್ಲಿ ಗೌರವ , ಪ್ರಕೃತಿಯನ್ನು ಪ್ರೀತಿಸುವುದರ ಜೊತೆ ಜೊತೆಗೆ ಪ್ರಾಣಿ-ಪಕ್ಷಿ ಸಂಕುಲ , ಅದಷ್ಟೇ ಯಾಕೆ ಈ ಇಡಿ ಪ್ರಪಂಚವನ್ನೇ ಪ್ರೀತಿಸುವುದನ್ನು ಹೇಳಿ ಕೊಟ್ಟ ನನ್ನ ಗುರುಗಳು ನಮ್ಮ ತಂದೆಯವರು. ಅವರ ಬಗ್ಗೆ ಎಷ್ಟು ಹೇಳಿದರೂ ಕಮ್ಮಿ ಅನ್ನಿಸುತ್ತೆ. ಈ ಲೇಖನವನ್ನು ಬರೆಯಲು ಅವರ ನೆನಪುಗಳೇ ಕಾರಣ. ನಾನು ಶಾಲೆ, ಕಾಲೇಜ್ ಮ್ಯಾಗಜಿನ್ ಗಳಿಗೆ ಸಣ್ಣ ಕತೆ, ಕವನ ಬರೆಯಲು ಮೂಲ ಕಾರಣ ನನ್ನ ಪ್ರೀತಿಯ ತಂದೆಯವರು . ನನ್ನ ಪ್ರತಿ ಕತೆ, ಕವನ, ಅವರಿಗೆ ಮೊದಲು ತೋರಿಸಿ ಅವರಿಂದ ತಪ್ಪು - ಒಪ್ಪು ತಿದ್ದಿಸಿ, ಏನಾದ್ರು ಹೊಸ ಪದ ಪುಂಜಗಳು ಬೇಕಿದ್ದ ಪಕ್ಷದಲ್ಲಿ ಅಪ್ಪಾನೆ ನನ್ನ ನಿಘಂಟು; ಅವರಿಂದ ಕೆಲವೊಂದು ಪದಗಳನ್ನು ಸೇರಿಸಿ, ಅದನ್ನು ಮತ್ತೂ ಬೇಕೆಂದರೆ ಮುಂದುವರಿಸಿ ಅದಕ್ಕೆ ಏನಾದ್ರೂ ಮಾಹಿತಿ ಬೇಕಿದ್ರೆ ಲೈಬ್ರರಿಗೆ ಅಪ್ಪನ ಜೊತೆ ಹೋಗಿ ತುಂಬಾ ಕಾದಂಬರಿಗಳನ್ನು ಓಡುತ್ತಿದೆ; ಅಪ್ಪಾನೆ ಒಳ್ಳೊಳ್ಳೆ ಪುಸ್ತಕ ಹುಡುಕಿ ಕೊಡುತ್ತಿದ್ದರು. ನನಗೆ ಈಗಲೂ ನೆನಪಿದೆ, ತಂದೆಯವರು ಕೊಡುತ್ತಿದ್ದ ಪುಸ್ತಕ ತ್ರಿವೇಣಿ, ಆರ್ಯಾಂಭ ಪಟ್ಟಾಭಿ ಅವರಿಬ್ಬರೂ ಅಕ್ಕ-ತಂಗಿ ಎಂದು ಹೇಳಿ ಅವರ ಬುಕ್ಸ್ ಹುಡುಕಿ ಹುಡುಕಿ ಓದು ತ್ತಿದ್ದೆ. ತ್ರಿವೇಣಿಯವರು ಬರೆದ ಮೊದಲ ಕಾದಂಬರಿ ನಾನು ಅತ್ಯಂತ ಆಸಕ್ತಿ ಇಂದ ಮತ್ತೆ ನಾನು ಓದಿದ ಮೊದಲ ಕಾದಂಬರಿ 'ಬೆಕ್ಕಿನ ಕಣ್ಣು' ತುಂಬಾ ಸೊಗಸಾಗಿ ಓದಿಸಿಕೊಂಡು ಹೋದ ಮೊದಲ ಕಾದಂಬರಿ. ಮೊದಲ ಪುಟದಿಂದ ಕೊನೆಯವರೆಗೂ ತಲೆ ಎತ್ತದೆ ಸಂಪೂರ್ಣ ಓದಿ ಮುಗಿಸಿದೆ. ನನ್ನ ಬಾಲ್ಯದಲ್ಲಿ ನಾನ್ಯಾವತ್ತೂ ಮಾರ್ಕೆಟಿಗಾಗಲೀ ಶಾಪಿಂಗ್ ಗಾಗಲೀ ಹೋಗುವುದು ವಾಡಿಕೆ ಇರಲಿಲ್ಲ ಶಾಲೆ, ಕಾಲೇಜ್, ತಪ್ಪಿದರೆ ಸಿಟಿ ಸೆಂಟ್ರಲ್ ಲೈಬ್ರರಿ . ನನಗಿನ್ನೂ ಚೆನ್ನಾಗಿ ಜ್ಞಾಪಕ ಇದೆ ; ಶಾಲೆಗೆ ಬೇಸಿಗೆ ರಜ ಬಂದರೆ ಸಾಕು, ಮನೆಗೆ ಕನ್ನಡ ಪ್ರಭ, ಸುಧಾ, ಪ್ರಜಾಮತ, ಚಂದಮಾಮ , ಗೊಂಬೆ ಮನೆ, ಮಯೂರ, ತುಷಾರ, ಇನ್ನು ಮುಂತಾದ ದೈಹಿಕ, ಸಾಪ್ತಾಹಿಕ, ಮಾಸಿಕ, ಎಲ್ಲವೂ ಮನೆ ಬಾಗಿಲಿಗೆ ಬರುತ್ತಿದ್ದವು. ಅಮ್ಮ, ಅಪ್ಪ, ಅಕ್ಕಂದಿರು, ಅಣ್ಣಂದಿರು, ಎಲ್ಲರು ಓದುವ ಗೀಳಿದ್ದವರೇ . ಎಲ್ಲರೂ ನಾ ಮುಂಚೆ, ತಾ ಮುಂಚೆ, ಎಂದು ಕಿತ್ತಾದುತ್ತಿದ್ದೆವು ಮತ್ತು ಆ ಗಲಾಟೆಗೆ ನಮ್ಮಮ್ಮ ಬಂದು ಹೀಗೆ ಹೇಳುತ್ತಿದ್ದರು ' ಅಯ್ಯೋ ಮಕ್ಕಳಾ ಯಾಕ್ಹೀಗೆ ಕಿತ್ತಾಡು ತೀರಾ ? ಮನೇಲೆ ಇರುತ್ತಲ್ಲ ನಿಧಾನ ವಾಗಿ ಓದಿ' ಎಂದರೂ ನಾವುಗಳು ಕಿವಿ ಮೇಲೆ ಹಾಕಿ ಕೊಳ್ಳುತ್ತಿರಲಿಲ್ಲ , ಎಲ್ಲ ಓದಿ ಮುಗಿಸಿ ಮತ್ತೆ ಮನೆ ಸಮೀಪ ಲೈಬ್ರರಿ ಗೆ ಹೋಗಿ ತುಂಬಾ ಬುಕ್ಸ್ ಓ ದುತ್ತಿದ್ದೆವು. ನಾನು ಮೊದಲು ಓದಿದ ಒಂದು ಸಣ್ಣ ಕಥೆ 'ರಾ ಜು ಮತ್ತು ಹುರುಳಿ ಬೀಜ' ಅದೆಂತಹ ಕಲ್ಪನೆ ಎಂದರೆ ನನ್ನ ಮನಸ್ಸಿನಲ್ಲಿ ಅಚ್ಚು ಒತ್ತಿದ ಮೊದಲ ಕಥೆ. ಇದೆಲ್ಲದರ ಪ್ರೇರೇಪಣೆ ನನಗೆ ಬರೆಯುವ ಹವ್ಯಾಸ ಮೂಡಿ ಬರಲು ಕಾರಣ ವಾಯಿತು. ಇನ್ನು ಬರೆಯುತ್ತ ಹೋದರೆ ನನ್ನ ಬಾಲ್ಯ , ನನ್ನ ಶಾಲಾ ದಿನಗಳು, ಎಲ್ಲ ನನ್ನ ಮನಸ್ಸಿನ ತೆರೆ ಮೇಲೆ ಮೂಡಿ ಬರುತ್ತೆ. ಅದನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಿ. ಸಮಯ ದೊರೆತಾಗ ಮತ್ತೊಂದಿಷ್ಟು ಬರೆಯುವ ಚಪಲ. ಅಯ್ಯೋ ಇನ್ನು ಅಡಿಗೆ ಮನೆಯಲ್ಲಿ ತುಂಬಾ ಕೆಲಸ ಬಾಕಿ ಇದೆ :೦ ಮತ್ತೆ ಮುಂದುವರಿಸುತ್ತೇನೆ.
ಉಮಾ ಪ್ರಕಾಶ್