Wednesday, 12 November 2014


''ಹೆಮ್ಮರದ ಬಯಕೆ''



ಅಯ್ಯೋ ನಾನು ನಾಳೆ ಬಿದ್ದು ಹೋಗುವ ಮರ
ಹಣ್ಣಾದ ಎಲೆಗಳನ್ನು ನೋಡಿ ಬೇಸತ್ತು ಹೋಗಿದೆ
ಹಸಿರು ಇದ್ದರೆ ಅಷ್ಟೇ ಮರ ನೋಡಲು ಚೆಂದ
ಎಂದು ನನ್ನ ಮುಂದೆ  ಹಾದು ಹೋಗುವವರೆಲ್ಲ
ಹೇಳಿ ಹೇಳಿ ನನಗೆ ಜೀವನದಿ ಜಿಗುಪ್ಸೆಯಾಗಿದೆ  !!!

ಈ ಹಣ್ಣಾಗಿ ಉದುರಿದ ಎಲೆಗಳಿಗೆ ಜೀವವೆಲ್ಲಿ ಇನ್ನು ?
ಆ ನಂತರ ನನ್ನ ಬೇರುಗಳೆಲ್ಲ ಮಣ್ಣಿನಿಂದ ಸಡಿಲಗೊಂಡು
ನನ್ನ ರೆಂಬೆ ಕೊಂಬೇಗಳೆಲ್ಲ ಒಣಗಿ ಹೋಗುತ್ತವೆ
ಕಟ್ಟಿಗೆ ಒಡೆಯುವವ ನನ್ನ ದೇಹಕ್ಕೆ 'ಮುಕ್ತಿ' ಕೊಡುತ್ತಾನೆ

ನಂತರ ನನ್ನನ್ನು ಒಲೆ ಉರಿಸಲು  ಬಳಸಿ ಕೊಳ್ಳುತ್ತಾರೆ
ನನ್ನಿಂದ ವಿಧ ವಿಧವಾದ ಅಡುಗೆ ತಿನಿಸುಗಳನ್ನು ಮಾಡುತ್ತಾರೆ
'ದಯಾ ಮರಣ' ಪಾಲಿಸೆಂದು ಬೇಡಿಕೊಂಡೆ ಆ ದೇವರ
ಅಷ್ಟರಲ್ಲೇ ಮರ ಕಡಿದು ನನ್ನ ದೇಹಕ್ಕೆ ಮುಕ್ತಿ ಕೊಟ್ಟವರ
ನನ್ನ 'ಕೊನೆಯಾಸೆಯಂತೆ'  ನನ್ನ 'ಅಂತ್ಯ ಸಂಸ್ಕಾರ' ಮಾಡಿದವರ
                     ಆ ಭಗವಂತ ನೂರು ವರುಷ
                                                                                                   ಆಯುರಾರೋಗ್ಯ ಕೊಟ್ಟು ಕಾಪಾಡಲಿ



 << ಉಮಾ ಪ್ರಕಾಶ್ >>


ದೇವರು ಮೆಚ್ಚನಂತೆ !!!


ನೋಡಿಯೂ ನೋಡದಂತೆ
ಕೇಳಿಯೂ ಕೇಳಿಸದಂತೆ
ಕಂಡರೂ ಕಾಣಿಸದಂತೆ
ಇರುವವರ ದೇವರು ಮೆಚ್ಚನಂತೆ :

ಇಷ್ಟವಾದರೂ ಇಷ್ಟವಾಗದಂತೆ
ಕಷ್ಟವಾದರೂ ಕಷ್ಟವಾಗದಂತೆ
ಸುಖವಿದ್ದರೂ ಸುಖವಿಲ್ಲದಂತೆ
ನಟಿಸುವವರ ದೇವರು ಮೆಚ್ಚನಂತೆ :

ಗುರಿಇಲ್ಲದಿದ್ದರೂ ಗುರಿ ಇದ್ದಂತೆ
ಅರಿವಿಲ್ಲದಿದ್ದರೂ  ಅರಿವಿದ್ದಂತೆ
ಮನಸಿಲ್ಲದಿದ್ದರೂ ಮನಸಿದ್ದಂತೆ 
ಇರುವವರ ದೇವರು ಮೆಚ್ಚನಂತೆ :

ಭಕುತಿ ಇಲ್ಲದಿದ್ದರೂ ಭಕುತಿ ಇದ್ದಂತೆ
ಭಾವವಿಲ್ಲದಿದ್ದರೂ ಭಾವವಿದ್ದಂತೆ
ಶಕ್ತಿ ಇಲ್ಲದಿದ್ದರೂ ಶಕ್ತಿ ಇದ್ದಂತೆ
ನಟಿಸುವವರ ದೇವರು ಮೆಚ್ಚನಂತೆ :