Monday 25 March 2013





ಹಾಳೆ - ಮೂರು :

ಒಮ್ಮೆ ಹೀಗೊಂದು ದಿನ ಲೈಬ್ರರಿ ಇಂದ ತಂದ 'ಸಣ್ಣ ಕಥೆಗಳ ಸಂಕಲನ' ಮನೆ ಇಂದ ಶಾಲೆಗೆ ಹೋಗುವ ದಾರಿಯಲ್ಲಿ ಓದುತ್ತ ನಡೆಯುತ್ತಿದ್ದೆ .  ಪುಸ್ತಕದಲ್ಲಿ ಹುದುಗಿ ಹೋಗಿದ್ದ ನನಗೆ ಯಾವುದರ ಪರಿವೆ ಇಲ್ಲದೆ ಪುಸ್ತಕ ಹಿಂತಿರುಗಿಸುವ ದಿನವಾದದರಿಂದ  ಓದಿ ಮುಗಿಸಲೇ ಬೇಕು ಎಂಬ ಛಲ ಇತ್ತು ಹಾಗಾಗಿ ಓದುತ್ತ ಸಾಗಿದ್ದೆ.  ೨-೩ ಕಿ. ಮಿ.  ದಾರಿ ಸವೆಯ ಬೇಕಿತ್ತು.  ಓದುತ್ತ ಓದುತ್ತ ಒಂದು ತೆರೆದ ಒಳ ಚರಂಡಿಗೆ ದೊಪ್ಪನೆ ಬಿದ್ದೆ ನೋಡಿ ; ಒಳ್ಳೆ ಪ್ರಪಾತಕ್ಕೆ ಬಿದ್ದ ಅನುಭವ!!   ನಾನು ಅಪ್ಪ ದೇವರೆ ಈ ಕಂದಕದಿಂದ ಹೊರ ಬರುವಂತೆ ಮಾಡು ನಿನಗೆ ೧೦೧  ನಮಸ್ಕಾರ ಹಾಕುತ್ತೆನೆ.  ಜೊತೆಗೆ ಹೆಜ್ಜೆ ನಮಸ್ಕಾರ, ೧ ೦ ೧  ಬಾರಿ  
' ಓಂ ಶ್ರೀ ಗಣೇಶಾಯ ನಮಃ '   ಎಂದು ಭಕ್ತಿ ಇಂದ ಬರೆಯುತ್ತೇನೆ ಎಂದು ಹರಸಿಕೊಂಡೆ.  ಯಾರಾದ್ರು ಕಾಪಾಡಿ ಎಂದು ಅರಚಿ ಅರಚಿ  ಗಂಟಲ್ಲೆಲ್ಲ ಒಣಗಿ ಹೋಗಿ ನೀರು ಕುಡಿಯಬೇಕೆನಿಸಿತು.  ಸುಮಾರು ತಾಸುಗಳೇ ಕಳೆದು ಹೋದವು .  ಕೊನೆಗೆ ಒಬ್ಬರು ವಯಸ್ಸಾದ ತಾತ  ಒಂದು ಹಗ್ಗವನ್ನು ಇಳಿ  ಬಿಟ್ಟು ಅದನ್ನು ಗಟ್ಟಿಯಾಗಿ ಹಿಡಿದು ಕೊಳ್ಳುವಂತೆ ಹೇಳಿದರು.  ಅವರ ಆ ಸಹಾಯ ನಾನು ಈಗಲೂ ಸ್ಮರಿಸುತ್ತೇನೆ.  ಕೊನೆಗೆ ಮೇಲೆ ಬಂದ ಮೇಲೆ ಯುನಿಫಾರ್ಮ್ ಎಲ್ಲ ಕೊಳೆಯಾಗಿತ್ತು .  ಇನ್ನು ಶಾಲೆಗೆ ಹೋಗುವುದರಲ್ಲಿ ಅರ್ಥ ಇಲ್ಲ ಎಂದು ಮನೆಗೆ ಓಡಿದೆ.  ಮನೆಗೆ ಹೋಗಿ ಅಮ್ಮನಿಗೆ ನಡೆದ ವಿಚಾರ ಎಲ್ಲ ವಿವರಿಸಿದೆ.  ಅಮ್ಮ ಬಿಸಿ ಬಿಸಿ ನೀರು ಹಂಡೆ ಇಂದ ಮೊಗೆದು ಮೊಗೆದೂ  ಸುರಿದರು.  ಮನಸ್ಸು ದೇಹ ಎಲ್ಲ ಹಾಯೆನಿಸಿತು.  ಮತ್ತೆಂದೂ ನಾನು ದಾರಿಯಲ್ಲಿ ಪುಸ್ತಕ ಓದುವ ಸಾಹಸ ಮಾಡಲಿಲ್ಲ!!!!!!!


ಮುಂದುವರಿಯುವುದು ...................   


Sunday 24 March 2013



ಹಾಳೆ - ಎರಡು 

ಹಾಗೆ ನನ್ನ ಬಾಲ್ಯ ನನ್ನ ಸ್ಮೃತಿ ಪಟಲದಲ್ಲಿ ಅಚ್ಚಳಿಯದೆ ಬೇರೂರಿದೆ  ನಾನೋದಿದ ಕೆಲವೊಂದು ಪುಸ್ತಕಗಳು .  ಒಮ್ಮೆ 'ಅಲಿಬಾಬ ಮತ್ತು ನಲವತ್ತು ಮಂದಿ ಕಳ್ಳರು' ಪುಸ್ತಕ ಹಿಡಿದು ಕುಳಿತ್ತಿದೆ ; ಹಾಗೆ ಓದುತ್ತ ಓದುತ್ತ ನನ್ನ ಕಲ್ಪನೆಯಲ್ಲಿ ಅಲಿಬಾಬ ಕಥೆ ತುಂಬಾ ಚೆನ್ನಾಗಿ ಉಳಿದು ಹೊಯಿತು.  ನನ್ನ ಮಕ್ಕಳಿಗೆ ನಾನು ಚಿಕ್ಕಂದಿನಲ್ಲಿ ಓದಿದ ಎಲ್ಲ ಕತೆಗಳನ್ನು ಹೇಳುತ್ತಾ ಬಂದಿದ್ದೇನೆ.  ನನ್ನ ಕಥೆ ಹೇಳುವ ವೈಖರಿ ಕಂಡು ಒಮ್ಮೊಮ್ಮೆ ನಮ್ಮ ಅತ್ತೆ ಕೂಡ ''ಅಲ್ವೇ ಉಮ ಅದೆಷ್ಟು ಚೆನ್ನಾಗಿ ಕತೆ ಹೇಳುತ್ತೀಯ ನೀನು,  ನಂಗೆ ನಿದ್ದೆ ಬರ್ತಿಲ್ಲ ನಿನ್ ಕತೆ ಕೇಳಿದ್ರೆ ಒಳ್ಳೇ  ನಿದ್ರೆ ಬರುತ್ತೆ ನಂಗೂ ಕತೆ ಹೇಳು '' ಎಂದು ಎಷ್ಟೋ  ಬಾರಿ ನಾನು ಸಣ್ಣವಳಿದ್ದಾಗ  ಓದಿದ 'ಸಿನ್ ಡ್ರೆ ಲಾ',
'ಉದ್ದ ಕೂದಲಿನ ರಾಜ ಕುಮಾರಿ ಕತೆ',  'ಎರಡು ಗಿಳಿಗಳ ಕಥೆ' , 'ಕಪ್ಪೆ ರಾಜಕುಮಾರಿ ಕಥೆ' ಹಾಗೂ ಇನ್ನು ಮುಂತಾದ ಕಥೆಗಳನ್ನು ಅವರಿಗೆ ಹೇಳಿ ಅವರ ಮನಸಂತೋಶ  ಪಡಿಸುತ್ತಿದ್ದೆ .  ಆಗ ನನಗಾಗುತ್ತಿದ್ದ ಆನಂದ ಅಷ್ಟಿಷ್ಟಲ್ಲ.
ಮತ್ತೆ ಇನ್ನು ಖುಷಿಯ ವಿಚಾರ ಎಂದರೆ ನಾನು ಕ್ಲಾಸ್ ಲೀಡರ್ ಆಗಿದ್ದೆ ನಮ್ಮ ಗುರುಗಳು ಏನಾದ್ರೂ ವಿಶ್ರಾಂತಿ ತಗೋ ಬೇಕಾದಾಗ ' ಉಮಾ, ಸ್ವಲ್ಪ ಇಲ್ಲಿ ಬಾಮ್ಮಾ , ಒಂದು ಒಳ್ಳೆ ಕಥೆ ಹೇಳು ಮಕ್ಕಳನ್ನು ನಿಶ್ಯಬ್ದವಾಗಿ ಇರುವಂತೆ ಮಾಡ ಬೇಕಾದರೆ ನಿನ್ನ ಕಥೆಗಳೇ ರಾಮ ಬಾಣ. ಹಾಗಾಗಿ ನನಗೆ ಅದೊಂದು ಕಲೆ ಚಿಕ್ಕಂದಿನಲ್ಲೇ ಇತ್ತು.  ದೇವರ ನಾಮ ಹಾಡುವುದು, ಚಲನ ಚಿತ್ರ ಗೀತೆಗಳನ್ನು ಹಾಡುವುದು ,ಕಥೆ ಹೇಳುವುದು, ಇವೆಲ್ಲ ಹವ್ಯಾಸ ನನಗೆ ಚಿಕ್ಕಂದಿನಲ್ಲಿ ಬಂದ ಬಳುವಳಿ.  ಮತ್ತೆ ಎಲ್ಲದಕ್ಕೂ ಮೊದಲ ಬಹುಮಾನ ! 'ಆ ದಿನಗಳು' ಅದೆಂಥ ಸುಂದರ !!! ನನಗೆ ಮತ್ತೆ ಬಾಲ್ಯಕ್ಕೆ ಹೋಗ ಬೇಕೆನ್ನುವ ಆಸೆ.  ಆದರೂ ಅಡ್ಡಿ ಇಲ್ಲ ಬಾಲ್ಯದ ನೆನಪುಗಳು ನನ್ನಲ್ಲಿ ಇನ್ನು ಹಸಿರಾಗಿದೆ.   ಯಾವಾಗ ಬೇಕಿದ್ದರೂ ಕಲ್ಪನೆಯಲ್ಲಿ ಬಾಲ್ಯಕ್ಕೆ ತೆರಳಿ ಮತ್ತೆ ನನ್ನ ಈಗಿನ ಅವಸ್ತೆಗೆ ಮರಳುತ್ತೇನೆ.  ಒಮ್ಮೆ 'ಭಗೀರಥ ಪ್ರಯತ್ನ' ನಾಟಕದಲ್ಲಿ ನಾನು ಗಂಗೆಯಾಗಿ ಅಭಿನಯಿಸಿದ್ದೆ. ಭಗೀರಥ ಗಂಗೆಯನ್ನು ಇಳಿದು ಬಾ ಗಂಗೆ, ಇಳಿದು ಬಾ ಭುವಿಗೆ ಎಂದು ಹಾಡಿ ಕರೆಯುತ್ತಿದ್ದ, ನಾನು ಸ್ವಲ್ಪ ಎತ್ತರದಿಂದ ಇಳಿದು ಬರುವಂತೆ ವೇದಿಕೆ ನಿರ್ಮಿತವಾಗಿತ್ತು.  ಆಗೆಲ್ಲ ಶಾಲೆಯಲ್ಲಿ ಇದ್ದ ಬೆಂಚನ್ನೆ ಒಂದರ ಮೇಲೊಂದು ಮೆಟ್ಟಿಲಿನಂತೆ ಇಟ್ಟಿದ್ದರು, ನಾನು ಬಿಳಿ ಸೀರೆಯುಟ್ಟು, ಉದ್ದವಾದ ಹೆರಳು ಬಿಚ್ಚಿಕೊಂಡು ಬರುತ್ತಿರುವಾಗ ಬೆನ್ಚಿಂದ ಎಡವಿ ಬಿದ್ದೆ ಬಿಟ್ಟೆ !!! ಎಂತಹ ಅನಾಹುತ ಅಂತೀರಾ?? ಒಂದೆಡೆ ನನ್ನ ಉದ್ದವಾದ ಜಡೆ ಬೆಚಿಗೆ ಸಿಕ್ಕಿಹಾಕಿ ಕೊಂಡಿದೆ, ಇನ್ನೊಂದೆಡೆ ಸೀರೆಯ ಸೆರಗು ಸಿಕ್ಕಿ ಕೊಂಡಿದೆ.  ಒಳ್ಳೇ ಫಜೀತಿ ಸ್ವಲ್ಪ ಸಮಯ ಪರದೆ ಇಳಿಸಿದರು ; ನಂತರ ನಾಟಕ ಏನೋ ಚೆನ್ನಾಗಿ ಮೂಡಿ ಬಂತು; ಆದರೆ ನನ್ನ ಜಡೆ ಬಿಡಿಸಲಾರದೆ ಸ್ವಲ್ಪ ಕಟ್ ಮಾಡಿದರು ನಮ್ಮಮಿಸ್ !! ಅದನ್ನು ನೆನಪಿಸಿಕೊಂಡರೆ ಈಗ ನನ್ನ ಮೊಗದಲ್ಲಿ ಮುಗುಳ್ನಗೆ ಮಿಂಚಿ ಮಾಯವಾಗುತ್ತದೆ.  ಆಹಾ ಬಾಲ್ಯವೇ, ಇನ್ನೊಮ್ಮೆ ಬಾರಲಾರೆಯ ನನ್ನ ಬದುಕಲ್ಲಿ !

ಮುಂದುವರಿಯಲಿದೆ .........
ಉಮಾ ಪ್ರಕಾಶ್ 



































 ಯಾಕೋ ಇತ್ತೀಚಿಗೆ ಮನೆಯ ಮುಂದೆ 'ಬಸವ' ನನ್ನು ಕರೆದು ಕೊಂಡು ಬರುವವರು ಜಾಸ್ತಿ ಆಗ್ತಾ ಇದ್ದಾರೆ.  ನಮ್ಮ ಮನೆ ಮುಂದೆ ಅಂತು ವಾರಕ್ಕೆ ಮೂರು ಬಾರಿ ಒಂದು ಹೆಂಗಸು ತನ್ನ ಪುಟ್ಟ ಹಸುಗೂಸಿನೊಂದಿಗೆ '' ಅಮ್ಮ ತಾಯಿ ಬಸವಣ್ಣ ನಿಗೆ ಏನಾದ್ರೂ ದಾನ ಮಾಡಿ ...... ಅಮ್ಮ.......  ತಾಯಿ............. ಎಂದು ಗಂಟಲು ಹರಿದು ಕೊಳ್ಳುವಂತೆ ಕೂಗ್ತಾ ಇರ್ತಾಳೆ.  ಮುದ್ದಾದ ೨-೩ ವರ್ಷ ವಯಸ್ಸಿನ ಹೆಣ್ಣು ಮಗುವನ್ನು ಕಂಕುಳಲ್ಲಿ ಹೊತ್ತು ಪ್ರತಿ ಮನೆ ಮುಂದೆ ಕೂಗಿ ಅವರು ಕೊಟ್ಟದ್ದನ್ನು ತೆಗೆದು ಕೊಂಡು ಹೇಗೋ ಜೀವನ ಸಾಗಿಸುತ್ತಾಳೆ .  

















Saturday 23 March 2013

ಬರೆಯೋದು ಒಂದು ಕಲೆ


ಹಾಳೆ - ಒಂದು  :-
 ''ಏನಾದ್ರೂ ಬರೆ ಆದ್ರೆ ಚೆನ್ನಾಗಿ ಬರೆ  ; ಬರೆಯೋದು ಒಂದು ಕಲೆ ''  ಅಂತ ನಮ್ತಂದೆ ನಂಗೆ ಯಾವಾಗಲೂ  ಹೇಳ್ತಿದ್ದರು.  ನನ್ನ ಚೂರು ಪಾರು ಬರವಣಿಗೆಗೆ ನಮ್ತಂದೆ ನನ್ ಬಗ್ಗೆ ತೋರಿಸ್ತಿದ್ದ ಪ್ರೀತಿ, ಮುತುವರ್ಜಿ, ಕಾಳಜಿ, ಅವರು ಹುರಿದುಂಬಿಸುತ್ತಿದ್ದ  ಪರಿ ನಾನು ಬರೆಯುವಾಗಲ್ಲೆಲ್ಲ ಅವರು ನನ್ನೊಂದಿಗೆ ಇದ್ದಾರೆ ಎಂಬ ನನ್ನ ಒಳ ಮನಸ್ಸಿನ ಆ ಚಿಂತನೆಗೆ ನಾನು ಮೆಚ್ಚಲೇ ಬೆಕು.  ಯಾಕೆಂದರೆ ಈಗ ನನ್ನ ತಂದೆ ನಮ್ಮೊo ದಿಗಿಲ್ಲ  ಆದರೂ ಅವರ ಆ ನೆನಪು ನನ್ನ ಬರವಣಿಗೆಗೆ ಈಗಲೂ ತುಂಬಾ ಸಹಾಯಕವಾಗ್ತಾ ಇದೆ.  ನನ್ನನ್ನು ತಿದ್ದಿ ತೀಡಿ ಒಳ್ಳೆ ಸಂಸ್ಕಾರ , ಗುರು ಹಿರಿಯರಲ್ಲಿ ಗೌರವ , ಪ್ರಕೃತಿಯನ್ನು ಪ್ರೀತಿಸುವುದರ  ಜೊತೆ ಜೊತೆಗೆ ಪ್ರಾಣಿ-ಪಕ್ಷಿ ಸಂಕುಲ , ಅದಷ್ಟೇ ಯಾಕೆ ಈ ಇಡಿ ಪ್ರಪಂಚವನ್ನೇ ಪ್ರೀತಿಸುವುದನ್ನು ಹೇಳಿ ಕೊಟ್ಟ ನನ್ನ ಗುರುಗಳು ನಮ್ಮ ತಂದೆಯವರು.  ಅವರ ಬಗ್ಗೆ ಎಷ್ಟು ಹೇಳಿದರೂ ಕಮ್ಮಿ ಅನ್ನಿಸುತ್ತೆ.  ಈ ಲೇಖನವನ್ನು ಬರೆಯಲು ಅವರ ನೆನಪುಗಳೇ ಕಾರಣ.  ನಾನು ಶಾಲೆ, ಕಾಲೇಜ್ ಮ್ಯಾಗಜಿನ್ ಗಳಿಗೆ ಸಣ್ಣ ಕತೆ, ಕವನ ಬರೆಯಲು ಮೂಲ ಕಾರಣ ನನ್ನ ಪ್ರೀತಿಯ ತಂದೆಯವರು .  ನನ್ನ ಪ್ರತಿ ಕತೆ, ಕವನ, ಅವರಿಗೆ ಮೊದಲು ತೋರಿಸಿ ಅವರಿಂದ ತಪ್ಪು - ಒಪ್ಪು ತಿದ್ದಿಸಿ, ಏನಾದ್ರು ಹೊಸ ಪದ ಪುಂಜಗಳು ಬೇಕಿದ್ದ ಪಕ್ಷದಲ್ಲಿ ಅಪ್ಪಾನೆ ನನ್ನ ನಿಘಂಟು; ಅವರಿಂದ ಕೆಲವೊಂದು ಪದಗಳನ್ನು ಸೇರಿಸಿ, ಅದನ್ನು ಮತ್ತೂ ಬೇಕೆಂದರೆ ಮುಂದುವರಿಸಿ ಅದಕ್ಕೆ ಏನಾದ್ರೂ ಮಾಹಿತಿ ಬೇಕಿದ್ರೆ ಲೈಬ್ರರಿಗೆ ಅಪ್ಪನ ಜೊತೆ ಹೋಗಿ ತುಂಬಾ ಕಾದಂಬರಿಗಳನ್ನು ಓಡುತ್ತಿದೆ; ಅಪ್ಪಾನೆ ಒಳ್ಳೊಳ್ಳೆ ಪುಸ್ತಕ  ಹುಡುಕಿ ಕೊಡುತ್ತಿದ್ದರು.   ನನಗೆ ಈಗಲೂ ನೆನಪಿದೆ, ತಂದೆಯವರು ಕೊಡುತ್ತಿದ್ದ ಪುಸ್ತಕ ತ್ರಿವೇಣಿ, ಆರ್ಯಾಂಭ ಪಟ್ಟಾಭಿ ಅವರಿಬ್ಬರೂ ಅಕ್ಕ-ತಂಗಿ ಎಂದು ಹೇಳಿ ಅವರ ಬುಕ್ಸ್ ಹುಡುಕಿ ಹುಡುಕಿ ಓದು ತ್ತಿದ್ದೆ.  ತ್ರಿವೇಣಿಯವರು ಬರೆದ ಮೊದಲ ಕಾದಂಬರಿ ನಾನು ಅತ್ಯಂತ ಆಸಕ್ತಿ ಇಂದ ಮತ್ತೆ ನಾನು ಓದಿದ ಮೊದಲ ಕಾದಂಬರಿ 'ಬೆಕ್ಕಿನ ಕಣ್ಣು' ತುಂಬಾ ಸೊಗಸಾಗಿ ಓದಿಸಿಕೊಂಡು ಹೋದ ಮೊದಲ ಕಾದಂಬರಿ.  ಮೊದಲ ಪುಟದಿಂದ ಕೊನೆಯವರೆಗೂ ತಲೆ ಎತ್ತದೆ ಸಂಪೂರ್ಣ  ಓದಿ ಮುಗಿಸಿದೆ.   ನನ್ನ ಬಾಲ್ಯದಲ್ಲಿ ನಾನ್ಯಾವತ್ತೂ ಮಾರ್ಕೆಟಿಗಾಗಲೀ ಶಾಪಿಂಗ್ ಗಾಗಲೀ  ಹೋಗುವುದು ವಾಡಿಕೆ ಇರಲಿಲ್ಲ ಶಾಲೆ, ಕಾಲೇಜ್, ತಪ್ಪಿದರೆ ಸಿಟಿ ಸೆಂಟ್ರಲ್ ಲೈಬ್ರರಿ .  ನನಗಿನ್ನೂ ಚೆನ್ನಾಗಿ ಜ್ಞಾಪಕ ಇದೆ ; ಶಾಲೆಗೆ ಬೇಸಿಗೆ ರಜ  ಬಂದರೆ ಸಾಕು, ಮನೆಗೆ ಕನ್ನಡ ಪ್ರಭ, ಸುಧಾ, ಪ್ರಜಾಮತ, ಚಂದಮಾಮ , ಗೊಂಬೆ ಮನೆ,  ಮಯೂರ, ತುಷಾರ, ಇನ್ನು ಮುಂತಾದ ದೈಹಿಕ, ಸಾಪ್ತಾಹಿಕ, ಮಾಸಿಕ, ಎಲ್ಲವೂ ಮನೆ ಬಾಗಿಲಿಗೆ ಬರುತ್ತಿದ್ದವು.  ಅಮ್ಮ, ಅಪ್ಪ, ಅಕ್ಕಂದಿರು, ಅಣ್ಣಂದಿರು, ಎಲ್ಲರು ಓದುವ ಗೀಳಿದ್ದವರೇ .  ಎಲ್ಲರೂ  ನಾ ಮುಂಚೆ, ತಾ ಮುಂಚೆ, ಎಂದು ಕಿತ್ತಾದುತ್ತಿದ್ದೆವು  ಮತ್ತು ಆ ಗಲಾಟೆಗೆ ನಮ್ಮಮ್ಮ ಬಂದು ಹೀಗೆ ಹೇಳುತ್ತಿದ್ದರು ' ಅಯ್ಯೋ ಮಕ್ಕಳಾ ಯಾಕ್ಹೀಗೆ ಕಿತ್ತಾಡು ತೀರಾ ? ಮನೇಲೆ ಇರುತ್ತಲ್ಲ ನಿಧಾನ ವಾಗಿ ಓದಿ' ಎಂದರೂ ನಾವುಗಳು ಕಿವಿ ಮೇಲೆ ಹಾಕಿ ಕೊಳ್ಳುತ್ತಿರಲಿಲ್ಲ , ಎಲ್ಲ ಓದಿ ಮುಗಿಸಿ ಮತ್ತೆ ಮನೆ ಸಮೀಪ  ಲೈಬ್ರರಿ ಗೆ ಹೋಗಿ ತುಂಬಾ ಬುಕ್ಸ್ ಓ ದುತ್ತಿದ್ದೆವು.   ನಾನು ಮೊದಲು ಓದಿದ ಒಂದು ಸಣ್ಣ ಕಥೆ 'ರಾ ಜು ಮತ್ತು ಹುರುಳಿ ಬೀಜ' ಅದೆಂತಹ ಕಲ್ಪನೆ ಎಂದರೆ ನನ್ನ ಮನಸ್ಸಿನಲ್ಲಿ ಅಚ್ಚು ಒತ್ತಿದ ಮೊದಲ ಕಥೆ.   ಇದೆಲ್ಲದರ ಪ್ರೇರೇಪಣೆ  ನನಗೆ ಬರೆಯುವ ಹವ್ಯಾಸ ಮೂಡಿ  ಬರಲು ಕಾರಣ ವಾಯಿತು. ಇನ್ನು ಬರೆಯುತ್ತ ಹೋದರೆ ನನ್ನ ಬಾಲ್ಯ , ನನ್ನ ಶಾಲಾ  ದಿನಗಳು, ಎಲ್ಲ ನನ್ನ ಮನಸ್ಸಿನ ತೆರೆ ಮೇಲೆ ಮೂಡಿ ಬರುತ್ತೆ.  ಅದನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಿ.  ಸಮಯ ದೊರೆತಾಗ ಮತ್ತೊಂದಿಷ್ಟು ಬರೆಯುವ ಚಪಲ.  ಅಯ್ಯೋ ಇನ್ನು ಅಡಿಗೆ ಮನೆಯಲ್ಲಿ ತುಂಬಾ ಕೆಲಸ ಬಾಕಿ ಇದೆ :೦  ಮತ್ತೆ ಮುಂದುವರಿಸುತ್ತೇನೆ. 

ಉಮಾ ಪ್ರಕಾಶ್