Wednesday 25 September 2013

''ನೆರೆ ಹೊರೆ ಅಂದ್ರೆ ಒಬ್ರಿಗೊಬ್ರು ಆಗ್ಬೇಕು'' --- ಹರಿಕಥ ಶ್ರವಣ 3





.

''ನೆರೆ ಹೊರೆ ಅಂದ್ರೆ ಒಬ್ರಿಗೊಬ್ರು ಆಗ್ಬೇಕು'' ಎಂದು ಹಿಂದಿನ ಕಾಲದಿಂದಲೂ ನಮ್ಮ ಹಿರಿಯರು ಹೇಳಿರೋ ರೂಢಿ ಮಾತು.  ಹೌದು ನೆರೆ-ಹೊರೆಯವರ ಕಷ್ಟಕ್ಕೆ ಆಗ್ಬೇಕು ನಿಜ ಆದ್ರೆ ಅದು ದುರುಪಯೋಗ ಪಡಿಸ್ಕೊಬರ್ದು ಅಲ್ವೇ ?? ನಮ್ ಫ್ಯಾಮಿಲಿ ಯಲ್ಲಂತೂ ನಾವು ಚಿಕ್ಕಂದಿನಿಂದಲೂ ''ಹಾಸಿಗೆ ಇದ್ದಷ್ಟೇ ಕಾಲು ಚಾಚಿ '' ಅನ್ನೋ ಪಾಲಿಸಿಗೆ ಒಗ್ಗಿ ಹೋಗಿ ಬಿಟ್ಟಿದೀವಿ.  ಯಾಕೆಂದ್ರೆ ನಮ್ಮ ತಂದೆ ತಾಯಿ ಕಳಿಸಿದ ಪಾಠ ಅದು.  ''ಯಾವತ್ತೂ ನಮ್ಮ ಕೈ 'ಕೋ'  ಎನ್ನ ಬೇಕೇ ಹೊರತು 'ತಾ' ಅನ್ನ  ಬಾರದು '' ಎಂದು ನಮ್ಮ ತಂದೆ ಪದೇ ಪದೇ ಹೇಳಿ ನಮ್ಮನ್ನು ಅದೇ ರೀತಿ ಬೆಳೆಸಿದರು. ಅದು ಮೊದಲಿನಿಂದಲೂ ನಾವು ನಮ್ಮಲ್ಲಿ ರೂಡಿಸಿಕೊಂದು ನಮ್ಮಲಿ ರಕ್ತ-ಗತ ವಾಗಿ ಬಂದಿದೆ.  ನಮ್ ತಂದೆ ಹೇಳ್ತಿದ್ದರು ನಮಗೆ ಕಷ್ಟ ಬಂದಾಗ ಆ ಪರಮಾತ್ಮನ ಮೊರೆ ಹೋಗಬೇಕೆ ಹೊರತು ಹುಲು ಮಾನವರ ಮುಂದೆ ಸಹಾಯ ಹಸ್ತ ಚಾಚಬಾರದು; ಸಾಧ್ಯವಾದರೆ ನಮ್ಮ ಕೈಲಾದ ಸಹಾಯ ಮಾಡಬೇಕು ಎಂದು ಹೇಳುತ್ತಲೇ ಇದ್ದರು ನಮ್ ಅಪ್ಪಜಿ.  ಎಲ್ಲರ ಕಷ್ಟ-ಸಂಕಷ್ಟ ಗಳನ್ನೂ ಪರಿಹರಿಸೋನು ಆ ದಯಾಮಯ ಭಗವಂತ, ಅವನ ನಾಮಸ್ಮರಣೆ ಮಾಡಿ ಅವನಿಗೆ ಶರಣಾಗಿ ನಮ್ಮ ಕಷ್ಟಗಳೆಲ್ಲ ಪರಿಹಾರ ಆಗುತ್ತೆ ಪರಮಾತ್ಮನ ದಯೆ ಇಲ್ಲದೆ ಒಂದು ಹುಲ್ಲು ಕಡ್ಡಿ ಕೂಡ ಬೆಳೆಯೋಲ್ಲ ಅವನ ಇಚ್ಚೆಯಂತೆ ಎಲ್ಲ ನಡೆಯೋದು ಅದಕ್ಕೆ ಅವನಿಗೆ ಶರಣಾದರೆ ಅವನೇ ದಾರಿ ತೋರುತ್ತಾನೆ ಎಂದು ಹೇಳುತ್ತಲೇ ನಮ್ಮನ್ನು ಒಳ್ಳೆ ದಾರಿಯಲ್ಲಿ ಬೆಳೆಸಿ, ಒಳ್ಳೆ ಮಾರ್ಗದರ್ಶನ ನೀಡಿ ಬೆಳೆಸಿದ ನಮ್ಮನ್ನು ಹೆತ್ತವರಿಗೆ ''ಹಾಟ್ಸ್ ಆಫ್ '' ಹೇಳಲೇ ಬೇಕು.  ನಮ್ಮ ತಂದೆ-ತಾಯಿ ಮಾಡಿದ ಪುಣ್ಯ, ನಮ್ಮ ಹಿರಿಯರ ಆಶೀರ್ವಾದ  ದಿಂದ ಕಷ್ಟದಲ್ಲಿ ಬೆಳೆದು ಬಂದ್ರು ಸಹ ಈಗ ಆ ಪರಮಾತ್ಮನ ದಯೆ ಇಂದ ಒಳ್ಳೆ ಒಂದು ಮಟ್ಟದಲಿ ಅನುಕೂಲವಾಗಿ ಇದ್ದೇವೆ, ನಮ್ಮ ಕೈಲಾದ ಸಹಾಯ ಒಂದು ನಾಲ್ಕು ಜನರಿಗೆ ಮಾಡಿ ಸುಖ-ಶಾಂತಿ ಇಂದ ಬದುಕು ನಡೆಸುತ್ತಿದ್ದೇವೆ. 

ಈ ಪೀಠಿಕೆ  ಯಾಕೆ ಶುರು ಆಯಿತು ಎಂದರೆ ನಮ್ಮ ಪಕ್ಕದ ಮನೆಯ ಒಬ್ಬರು ಬಹಳ ತರಾತುರಿ ಇಂದ ಬಂದು '' ಮೇಡಂ ಏಟಿಎಂ probelem ದುಡ್ಡು ಡ್ರಾ ಮಾಡೋಕೆ ಆಗ್ತಾ ಇಲ್ಲ ಸ್ವಲ್ಪ ಅರ್ಜೆಂಟ್ ಹಾಗಾಗಿ ಸ್ವಲ್ಪ ದುಡ್ಡು ಬೇಕು ಒಂದು ಗಂಟೆ ಯಲ್ಲಿ ಡ್ರಾ ಮಾಡಿ ತಂದು ಕೊಡುತ್ತೇನೆ ಎಂದು ಹೇಳಿ ದುಡ್ಡು ತೆಗೆದು ಕೊಂಡು  ಹೋದೋರು ೧ ದಿನ ಆಯಿತು, ೨ ದಿನ ಆಯಿತು, ೨ ವಾರ ಆಯಿತು ಅವರ ಸುಳಿವಿಲ್ಲ !!!! ಈ ರೀತಿ ಸಮಯ ಸಾಧಕರಿಗೆ ಸುಳ್ಳು ಹೇಳಿ ದುಡ್ಡು ತೆಗೆದು ಕೊಳ್ಳುವ ಅದೆಂಥ ಪರಿಸ್ತಿತಿ ಇತ್ತೋ ನಾ ಬೇರೆ ಕಾಣೆ !  ಎಂಬಲ್ಲಿಗೆ ''ನೆರೆ ಹೊರೆ ಅಂದ್ರೆ ಒಬ್ರಿಗೊಬ್ರು ಆಗ್ಬೇಕು'' ---   ಹರಿ ಕಥಾ ಶ್ರವಣವು ಇಲ್ಲಿಗೆ ಸಮಾಪ್ತಿಯಾಗುವುದು.  ಜೈ ಪುಂಡರೀಕ ವರದೇ ...............ಹರ ಹರ ಮಹಾದೇವ್ !!!!






Saturday 21 September 2013

'ಕೋಪವನ್ನು ನಿಗ್ರಹಿಸಿ' ......ಹರಿಕಥ ಶ್ರವಣ 2



ಕೋಪವೆಂಬುದು ಅನರ್ಥ ಸಾಧನವು ; ಕೋಪದಿಂದಲೇ ಜಗಳ , ಕದನ, ಕೊಲೆ, ಹೊಡೆದಾಟ, ಬಡಿದಾಟ ಎಲ್ಲವು.  ಕೋಪವನ್ನು ನಿಯಂತ್ರಿಸದಿದ್ದರೆ ದೊಡ್ಡ ದೊಡ್ಡ ಅನಾಹುತಗಳಿಗೆ ಎಡೆ ಮಾಡಿ ಕೊಡುವುದರಲ್ಲಿ ಎರಡು ಮಾತಿಲ್ಲ. ಸಂಬಂಧ ಗಳನ್ನು ಮುರಿದು ಒಬ್ಬರ ಮುಖ ಒಬ್ಬರು ನೋಡದಂತೆ ಮಾಡುವುದಕ್ಕೂ ಕಾರಣ ಈ 'ಕೋಪ' ಆದ್ದರಿಂದ ಕೋಪವನ್ನು ಹತೋಟಿಯಲ್ಲಿಟ್ಟರೆ  ಚೆನ್ನ.  ದೊಡ್ಡವರು ಹೇಳಿಲ್ಲವೇ ''ಕೋಪದಲ್ಲಿ ಹೋದ ಮೂಗು, ಶಾಂತವಾದ ಮೇಲೆ ಬಾರದು'' ಎಂದು'

ಕೋಪವನ್ನು ನಿಗ್ರಹಿಸದಿದ್ದಲ್ಲಿ ನೋವಿನ ಸುಳಿಗೆ ಸಿಲುಕಿ ನರಳ ಬೆಕಾಗುತ್ತೆ.  ಇದಕ್ಕೊಂದು ನೀತಿ ಕಥೆಯುಂಟು.

ಒಬ್ಬ ಹುಡುಗ ಮಹಾ ಕೋಪಿಷ್ಟ. ಸುಲಭವಾಗಿ ಕೆರಳುತ್ತಿದ್ದ. ಇದನ್ನು ಕಂಡು ರೋಸಿದ ತಂದೆ ತನ್ನ ಮಗನಿಗೆ ಒಂದು ಚೀಲ ತುಂಬಾ ಮೊಳೆಗಳನ್ನು ಕೊಟ್ಟು ಪ್ರತೀ ಸಲ ಕೋಪ ಬಂದಾಗ ಮನೆಯ ಹಿಂದಿನ ಗೋಡೆಗೆ ಒಂದು ಮೊಳೆ ಹೊಡೆಯುವಂತೆ ಹೇಳುತ್ತಾನೆ. ಉತ್ಸಾಹದಿಂದ ಹೋಗುವ ಹುಡುಗ ಮೊದಲ ದಿನವೇ ೪೫ ಮೊಳೆಗಳನ್ನು ಹೊಡೆದು ಹಾಕುತ್ತಾನೆ ಗೋಡೆಗೆ. ಒಂದೆರಡು ವಾರಗಳಲ್ಲಿ ತನ್ನ ಕೋಪ ತಾಪ ಎಲ್ಲಾ ತಹಬಂದಿಗೆ ಬಂದು ಗೋಡೆಗೆ ಹೊಡೆಯಬೇಕಾದ ಮೊಳೆಗಳು ಸಂಖ್ಯೆಯಲ್ಲಿ ಕಡಿಮೆಯಾಗುತ್ತವೆ. ತನ್ನ ಅಪ್ಪ ಹೇಳಿದ ಹಾಗೆ ಮೊಳೆ ಹೊಡೆಯುವುದಕ್ಕಿಂತ ಸುಲಭ ತನ್ನ ಕೋಪವನ್ನು ನಿಯಂತ್ರಿಸುವುದು ಎಂದು ಈ ಹೊತ್ತಿಗಾಗಲೇ ಹುಡುಗ ಅರಿತು ಕೊಳ್ಳುತ್ತಾನೆ. ಕೊನೆಗೊಂದು ದಿನ ಹುಡುಗ ಮೊದಲಿನ ಥರ ಕೋಪಿಷ್ಠನಾಗದೇ ಮಂದಸ್ಮಿತನಾಗುತ್ತಾನೆ, ಸಂಯಮಿಯಾಗುತ್ತಾನೆ, ಮೊಳೆಯ ಚೀಲ ಬರಿದಾಗುತ್ತದೆ. ಈ ವಿಷಯವನ್ನು ತನ್ನ ತಂದೆಗೆ ಬಂದು ಹೇಳಿದಾಗ ತಂದೆ ಹೇಳುತ್ತಾನೆ, ಮಗನೇ, ಈಗ ಹೋಗಿ ನೀನು ಹೊಡೆದ ಮೊಳೆಗಳನ್ನೆಲ್ಲಾ ದಿನಕ್ಕೊಂದರಂತೆ ಕೀಳು ಎಂದು. ಮತ್ತೊಮ್ಮೆ ಗೋಡೆ ಕಡೆ ಮರಳಿದ ಹುಡುಗ ಸಾವಧಾನದಿಂದ ದಿನಕ್ಕೊಂದರಂತೆ ಒಂದೊಂದೇ ಮೊಳೆ ಗಳನ್ನು ಕೀಳುತ್ತಾನೆ. ಒಂದೆರಡು ವಾರಗಳ ತರುವಾಯ ಹುಡುಗ ಬಂದು ತಾನು ಎಲ್ಲಾ ಮೊಳೆಗಳನ್ನು ಕಿತ್ತ ವಿಷಯ ಹಿಗ್ಗುತ್ತಾ ತಂದೆಗೆ ತಿಳಿಸುತ್ತಾನೆ. ಮಗನನ್ನು ನೋಡಿ ಮುಗುಳ್ನಗುತ್ತಾ ಅವನ ಕೈ ಹಿಡಿದು ಕೊಂಡು ಹಿತ್ತಲಿನ ಗೋಡೆಗೆ ಬಂದ ತಂದೆ ಮಗನ ತಲೆ ತಡವುತ್ತಾ ಹೇಳುತ್ತಾನೆ, ಮಗೂ, ಎಷ್ಟು ಸುಂದರ ಕೆಲಸ ನೀನು ಮಾಡಿದೆ, ಆದರೆ ನೋಡು ಒಮ್ಮೆ ಗೋಡೆಯನ್ನು. ಮೊದಲಿನ ಹಾಗಿದೆಯೇ ಗೋಡೆ? ಎಷ್ಟೊಂದು ತೂತುಗಳು ಬಿದ್ದಿವೆ ನೋಡು ಗೋಡೆಯ ಮೇಲೆ. ಈ ಗೋಡೆ ಮೊದಲಿನ ಹಾಗೆ ಆಗಲು ಸಾಧ್ಯವೆ? ಎಂದಿಗೂ ಇಲ್ಲ. ನೀನು ಕೋಪದಲ್ಲಿ ಆಡಿದ ಮಾತುಗಳೂ ಸಹ ಹಾಗೆಯೇ. ನಿನ್ನ ಕೋಪದ ಮಾತುಗಳು, ಜನರಿಗೆ ಮಾಡಿದ ನೋವು ನೀನು ಮೊಳೆಗಳಿಂದ ಗೋಡೆಗೆ ಮಾಡಿದ ತೂತುಗಳಂತೆ. ಅವೆಂದೂ ಮಾಸಲಾರವು. ಒಬ್ಬನಿಗೆ ಚೂರಿ ಇರಿದು ಆ ಚೂರಿಯನ್ನು ಹಿಂದಕ್ಕೆ ಎಳೆಯಬಹುದು, ಆದರೆ ಆ ಚೂರಿ ಮಾಡಿದ ಗಾಯ? ಆ ಗಾಯ ಮಾಸುವುದೇ? ನೀನೆಷ್ಟೇ ಕ್ಷಮೆ ಕೋರಿದರೂ ಆ ಗಾಯ ಅಲ್ಲೇ ಇರುತ್ತದೆ. ಹಾಗಾಗಿ ಕೋಪ  ಬಂದಾಗ ನಾವೇನೋ ಕೆಲಸ ಮಾಡ ಬೇಕಾದರೂ ಒಮ್ಮೆ ಯೋಚಿಸಿ ಮಾಡಬೇಕು, ಯಾರಿಗೂ ಅದರಿಂದ ನೋವುಂಟಾಗದಂತೆ ಎಚ್ಚರ ವಹಿಸಬೇಕು ಎಂದು ಬುದ್ಧಿ ಮಾತು ಹೇಳಿದರು.

ಅನರ್ಘ್ಯ ರತ್ನಗಳಂಥ ಮಾತುಗಳನ್ನು ತನ್ನ ಪ್ರೀತಿಯ ತಂದೆಯ ಬಾಯಿಂದ ಆಲಿಸಿದ ಹುಡುಗ ತಾನು ಇನ್ನು  ಮುಂದೆ ಯಾವತ್ತು ಕೋಪದ ಕೈಗೆ ಬುದ್ಧಿ ಕೊಡುವುದಿಲ್ಲ ಎಂದು ಪ್ರಮಾಣ ಮಾಡಿ ಅದರಂತೆ ನಡೆದುಕೊಂಡು ಒಳ್ಳೆಯ ಸತ್ಪ್ರಜೆ ಯಾಗಿ ತನ್ನ ತಂದೆಗೆ ತಕ್ಕ ಮಗನಾಗಿ ಸುಖ ಬಾಳ್ವೆ ನಡೆಸುತ್ತಾನೆ ಎಂಬಲ್ಲಿಗೆ 'ಉಮ ಕಾಂಡದ' ಎರಡನೇ ಹರಿ ಕಥಾ ಶ್ರವಣವು ಇಲ್ಲಿಗೆ ಸಮಾಪ್ತಿಯಾಗುವುದು.  ಜೈ ಪುಂಡರೀಕ ವರದೇ ...............ಹರ ಹರ ಮಹಾದೇವ್ !!!!

Friday 20 September 2013

ದುಃಸ್ವಪ್ನ !!!!!




ಇತ್ತೀಚಿಗೆ ಯಾಕೋ ತಿಳಿಯದು ಭಯಂಕರ ಕನಸು ಮೇಲಿಂದ ಮೇಲೆ ಬೀಳ್ತಾ ಇದೆ.  ಹಿಂದೆಲ್ಲ ಏನಾದ್ರೂ ಕನಸ್ಸು ಅಂದರೆ 'ಸುಂದರ ಸ್ವಪ್ನ' ಕಂಡರೆ ಮನಸ್ಸಿಗೆ ಮುದ ನೀಡ್ತಾ ಇತ್ತು, ಮನಸ್ಸು ಉಲ್ಲಾಸಮಯ ಎನ್ನಿಸಿ ಆ ಕನಸನ್ನೇ ಮೆಲುಕು ಹಾಕುವಂತ ಮಾಡ್ತಾ ಇತ್ತು .  ಆದ್ರೆ ಅದ್ಯಾಕೋ ತಿಳಿಯದು ನಾನು ಪ್ರತಿ ನಿತ್ಯ ಮಲಗುವಾಗ 'ರಾಮ ಸ್ಕಂದಂ ಹನುಮಂತಂ ವೈನತೆಯಮ್  ವ್ರುಕೊದರಮ್  ಶಯನೆಯ ಸ್ಮರೆ ನಿತ್ಯಂ ದುಃಸ್ವಪ್ನಂ  ತಷ್ಯ ನಶ್ಯತಿ'  ಎಂದು ಪಠಣ ಮಾಡಿಯೇ ಮಲಗುತ್ತೆನೆ.  ಆದರೂ ಸಹಾ ನಿನ್ನೆ ರಾತ್ರಿ ಭಯಂಕರವಾದ ಕನಸೊಂದು ಕಂಡೆ ಸ್ನೇಹಿತರೆ. '೩ ಕೆ ಬ್ಲಾಗ್' ನ ಸಹೃದಯರು 'ಶತಮಾನಂಭಾವತಿ' ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಒಂದು ಆಮಂತ್ರಣ ನೀಡಿದ್ದರು. ನಾನು ಕೂಡ ಖುಷಿ ಇಂದ ಕುಣಿದಾಡಿದೆ. ವಿಶೇಷ ಏನಪ್ಪಾ ಅಂದರೆ ಬಿಡುಗಡೆ ಸಮಾರಂಭದ ನಂತರ ' ೩ ಕೆ ಬ್ಲಾಗ್' ನ ಎಲ್ಲ ಸದಸ್ಯರು ಒಂದೇ ಸೂರಿನಡಿ ಸೇರಿ 'ಕವಿತಾ ವಾಚನ' ಹಾಗೂ ಸ್ರಜನಶೀಲ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ವಾದವನ್ನು ಮಂಡಿಸಬಹುದು ಎಂಬುದಾಗಿತ್ತು. ನನಗೆ ಈ ರೀತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಬಹಳಾ ಖುಷಿ ಕೊಡುವ ವಿಚಾರ. ಸರಿ ಹೊರಡುವ ದಿನ ಅಂದರೆ ಕಾರ್ಯಕ್ರಮ ನಡೆಯುವ ದಿನ ಬಂತು. ನಾನು ನನಗೆ ಪ್ರಿಯವಾದ ಕೆಂಪು ಬಣ್ಣದ ಸೀರೆಯುಟ್ಟು, ಅದಕ್ಕೆ ಒಪ್ಪುವ ಬಳೆಗಳನ್ನು ತೊಟ್ಟು, ಹೂ ಮುಡಿದು ಹೊರಡಲು ರೆಡಿ ಆದೆ. ಇನ್ನೇನು ಬಸ್ ಸ್ಟಾಪ್ ಸಮೀಪಿಸುತ್ತಿದಂತೆ ಒಂದು ದೊಡ್ಡ ಕೊಂಬಿನ ಹೊರಿಯೊಂದು ನನ್ನನೇ ದೃಷ್ಟಿಸಿ ನೋಡುತ್ತಾ ಓಡಿಸಿಕೊಂಡು ಬಂತು. ನಾನು ಹೆದರಿ ಓಡಿದೆ, ಯಾಕೆಂದರೆ ಸ್ನೇಹಿತರೆ ನಿಮಗೆಲ್ಲ ತಿಳಿದಂತೆ ಹೋರಿಗಳಿಗೆ ಕೆಂಪು ಬಣ್ಣ ಕಂಡರೆ ಅಟ್ಟಿಸಿಕೊಂಡು ಓಡಿ ಬಂದು ಕೊಂಬಿಂದ ತಿವಿದು ಹಾಕುತ್ತದೆ ಎಂದು ನಮ್ಮಜ್ಜಿ ಕೂಡ ಆಗಾಗ ಹೇಳುತ್ತಿದ್ದರು. ಅದು ಅಲ್ಲದೆ ಡಾ.  ರಾಜ್ ಅಭಿನಯದ 'ಬಂಗಾರದ ಮನುಷ್ಯ' ಚಿತ್ರದ ಭಾರತಿ ಅವರ ಚಿತ್ರ ನನ್ನೆದುರು ಬಂತು. ಓಡಿ ಓಡಿ ಅಂತು ಇಂತೂ ಪಾರಾದೆ. ನನ್ನ ಪುಣ್ಯಕ್ಕೆ ಬಸ್ ಕೂಡ ಸಿಕ್ಕಿತು. ನಿರ್ವಾಹಕರು ಎಲ್ಲಿಗಮ್ಮ ಎಂದು ಕೇಳಿದ್ದು ಎರಡನೇ ಅಪಶಕುನ ನನಗೇಕೋ ಸ್ವಲ್ಪ ಹೊತ್ತು ಮನೆಗೆ ಹೋಗಿ ೫ ನಿಮಿಷ ಕಳೆದು ಮತ್ತೆ ಹೊರಡೋಣ ಯಾಕೋ ಶಕುನ ಸರಿ ಇಲ್ಲ ಅನ್ನಿಸಿತು. ಆದರೆ ಅ ಭಯಾನಕ ಹೋರಿಯ ಚಿತ್ರಣ ಕಣ್ಮುಂದೆ ಬಂದು ಬೇಡಪ್ಪ ಎಂದು ಹೆದರಿಕೊಂಡೇ ಬಸ್ ಪ್ರಯಾಣ ಮುಂದುವರಿಸಿದೆ. ಮುಂದಿನ ನಿಲ್ದಾಣ ಸೇರುವ ಮೊದಲೇ ಯಾರೋ ಒಬ್ಬ ವಾಹನ ಸವಾರ ಅಡ್ಡ ದಿಡ್ಡಿ ಬಂದು ನಮ್ಮ ಬಸ್ಗೆ ಹೊಡೆದ ಅವನು ಕೆಳಗೆ ಬಿದ್ದ ಪುಣ್ಯಕ್ಕೆ ಏನೂ ಅನಾಹುತ ಸಂಭವಿಸಲಿಲ್ಲ. ದೇವ್ರೇ! ದೇವ್ರೇ! ಸುರಕ್ಷಿತವಾಗಿ ಹೋಗುವಂತೆ ಮಾಡಪ್ಪ ಎಂದು ಮನಸಿನಲ್ಲಿ ಪ್ರಾರ್ಥಿಸುತ್ತ ಶ್ರೀ ಕನಕದಾಸರ ವಿರಚಿತ 'ಕೇಶವ ನಾಮ' ಮನಸಿನಲ್ಲಿ ಹೇಳಿ ಕೊಳ್ಳುತ್ತಾ ಕಣ್ಮುಚ್ಚಿ ಕುಳಿತ್ತಿದ್ದೆ. ಸ್ನೇಹಿತರೆ ಒಂದು ಕ್ಷಣದಲ್ಲಿ ಅದೇನಾಯಿತೋ ನನಗರಿವಿಲ್ಲ ನಾನು ಮತ್ತು ನನ್ನ ಸಹ ಪ್ರಯಾಣಿಕರು ಅದ್ಯಾವುದೋ ಆಸ್ಪತ್ರೆಯಲ್ಲಿ ಹಾಸಿಗೆ ಮೇಲೆ ಮಲಗಿದ್ದೇವೆ. ನನಗೆ ಹಾಸಿಗೆ ಇಂದ ಏಳಲು ಪ್ರಯತ್ನಿಸಿದರೆ ಕಾಲಲ್ಲಿ ಶಕ್ತಿಯೇ ಉಡುಗಿ ಹೋಗಿದೆ , ನನ್ನ ಪಕ್ಕದ ಬೆಡ್ ನವರು ಹೇಳುತ್ತಿದ್ದರು 'ಪಾಪ ನೋಡಿ ಈಕೆಗೆ ಕಾಲೇ ಹೋಗಿದೆಯಂತೆ ' ಅಯ್ಯೋ ದುರ್ದೈವವೇ ಇದೆನಾಯಿತು ನನ್ನನು ಯಾಕೆ ಈ ರೀತಿ ಪರೀಕ್ಷಿಸುತ್ತಿರುವೆ ಶ್ರೀ ಕೃಷ್ಣ ಎಂದು ಕೂಗಿ ಕೊಂಡೆ. ಮತ್ತೆ ಎದ್ದು ಕಣ್ಣು ಬಿಟ್ಟು ನೋಡುತ್ತೇನೆ ನಾನು ನಮ್ಮ ಮನೆಯಲ್ಲೇ, ನನ್ನ ಹಾಸಿಗೆಯಲ್ಲೇ ಇದ್ದೇನೆ. ಅಬ್ಬ ಯಾಕಿಂತ ದುಸ್ಸ್ವಪ್ನ ತಿಳಿಯಲಿಲ್ಲ. ಆದರೆ ನನಗೆ ಅನ್ನಿಸಿದ್ದು ಕೈ, ಕಾಲು ಕಳೆದು ಕೊಂಡು ಬದುಕಿ ಎಲ್ಲರಿಗೂ ಹೊರೆಯಾಗುವುದಕ್ಕಿಂತ ಜೀವ ಹೋದರೆ ಲೇಸು ಅಲ್ಲವೇ ಸ್ನೇಹಿತರೆ; ಆದರೂ ನಮಗೆ ಬಂದದ್ದನ್ನು ಸ್ವೀಕರಿಸೋಣ.ಏನಂತೀರಿ?

Thursday 19 September 2013

ಸುಳ್ಳೇ ಸುಳ್ಳು ......ಹರಿಕಥ ಶ್ರವಣ 1




ಈ ನಮ್ಮ ಬಾಳು ಒಂದು ಚದುರಂಗದ ಆಟ ಇದ್ದ ಹಾಗೆ .. ಇಲ್ಲಿ ಕೆಲವೊಮ್ಮೆ ಗೆಲ್ಲಬೇಕು ಅಂದಾಗ ಸುಳ್ಳಿನ ಅವಶ್ಯಕತೆ ಇದ್ದೇ ಇರುತ್ತೆ...ಜೀವನದಲ್ಲಿ ಕೆಲವೊಮ್ಮೆ ಸುಳ್ಳು ಹೇಳದೆ ವಿಧಿ ಇಲ್ಲ ಅಂತಹ ಪರಿಸ್ತಿತಿ ಉದ್ಭವ ಆಗುತ್ತೆ  ; ಕಹಿಯಾದ ಸತ್ಯ ಹೇಳುವುದಕ್ಕಿಂತ , ಸಿಹಿ ಯಾದ ಸುಳ್ಳು ಬಹಳ ಹಿತವಾಗಿರುತ್ತೆಯಾರಿಗೂ ಅದರಿಂದ ತೊಂದರೆಯಾಗಲಿ, ಅನಾನುಕೂಲವಾಗಲಿ ಆಗುವುದಿಲ್ಲ.  'ಸತ್ಯಂ ಬ್ರೂಯಾದ್, ಪ್ರಿಯಂ ಬ್ರೂಯಾದ್, ನ ಬ್ರೂಯಾದ್ ಸತ್ಯಂ ಅಪ್ರಿಯಂ'
ಅಲ್ಲವೇ ? ಹಾಗಾಗಿ ಕೆಲವೊಮ್ಮೆ ಸತ್ಯ ಹೇಳೋದ್ರಿಂದ ತುಂಬಾ ಅನಾಹುತಗಳು, ಕಹಿ ಘಟನೆಗಳು, ಸಂಬಂಧ ಒಡೆದುಹೋಗುವಂತ ಘಟನೆಗಳು ನಡೆಯುತ್ತವೆ.  ಇಂತಹ ಪ್ರಸಂಗಗಳು ದಿನ ನಿತ್ಯ ಎಲ್ಲರ ಜೀವನದಲ್ಲೂ ನಡೆಯುತ್ತವೆ.  ವೈದ್ಯರು ಕೆಲವೊಮ್ಮೆ, ರೋಗಿಗಳು ಜೀವಂತವಾಗಿರಲು ಅವರ ಆಯಸ್ಸುಕೆಲವೇ ತಿಂಗಳು ಅಥವಾ ಕೆಲವೇ ದಿನಗಳೇ ಆಗಲಿ ಇರುವಾಗ ವೈದ್ಯರು ಅಂತಹ ಸಂಧರ್ಭಗಳಲ್ಲಿ ಸುಳ್ಳು ಹೇಳಲೇ ಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ ಹಾಗೂ  ಅನಿವಾರ್ಯವಾಗಬಹುದು. ರೋಗಿಯ ಬಂಧುಗಳಿಗೆ ನಿಜ ಹೇಳಲೇ ಬೇಕಾಗುತ್ತದೆ. ಆದರೆ ರೋಗಿಯ ಹತ್ತಿರ ಇಂತಹ ಕಹಿ ಸುಳ್ಳನ್ನು ಹೇಳಿ ಅವನ ಉಳಿದಿರುವ ಕೆಲವು ದಿವಸಗಳನ್ನು ಜೀವಂತ ನರಕ ಮಾಡುವುದು ಸರಿಯೇ?  ಅವನಿಗೆ ನಿಜಾಂಶ ತಿಳಿಸದೆ ಹೋದರೆ ಅವನು ಇನ್ನು ಸ್ವಲ್ಪ ಹೆಚ್ಚು ದಿನ ಬದುಕುಳಿಯಬಹುದು ಅಥವಾ ಅವನ ಅರೋಗ್ಯ ಸುಧಾರಿಸಿ ಚೇತರಿಸಿ ಕೊಳ್ಳಲೂ ಬಹುದು ! ರೋಗಿಯು ಬದುಕಿರುವನಕ ಅವನನ್ನು ಖುಷಿಯಾಗಿ ಇಟ್ಟು ಕೊಳ್ಳುವುದೇ ವೈದ್ಯರ ಧ್ಯೇಯ ಕೂಡ. ನೋಡಿ ಇದು ' ಒಳ್ಳೆ ಸುಳ್ಳು'  ಅಲ್ಲವೇ ಸ್ನೇಹಿತರೆ ??  ಹಾಗಾಗಿ ನಾನು ಈ ನಿರ್ಧಾರಕ್ಕೆ ಬಂದೆ ''ಕಹಿಯಾದ ಸತ್ಯ ಹೇಳುವುದಕ್ಕಿಂತ , ಸಿಹಿ ಯಾದ ಸುಳ್ಳು ಹೇಳುವುದೇ ಲೇಸು'' ಹಾಗೆ ಯೋಚಿಸುತ್ತ ಈ ಲೇಖನ ಬರೆಯಲು ಸ್ಪೂರ್ತಿ ಬಂತು !!

ಸುಳ್ಳು ಗಳಲ್ಲಿ ಹಲವು ವಿಧ.  ೧) ಶುದ್ದ ಸುಳ್ಳು ೨) ಸಿಹಿ ಸುಳ್ಳು ೩) ಕಹಿ ಸುಳ್ಳು ೪) ಸ0ಕಷ್ಟದಿಂದ ಪಾರು ಮಾಡೋ ಸುಳ್ಳು ೫) ಸಹಾಯ ಮಾಡಲು ಸೃಷ್ಟಿಸುವ ಸುಳ್ಳು ೬) ಸಾವಿರ ಸುಳ್ಳು ಹೇಳಿ 'ಮ ದು ವೆ'  ಮಾಡೋ ಸುಳ್ಳು
೭) ಹುಟ್ಟು ಸುಳ್ಳು ಇತ್ಯಾದಿ ಇತ್ಯಾದಿ ......
೧)  ಶುದ್ದ ಸುಳ್ಳು  ಅಂದ್ರೆ ಅದರಲ್ಲಿ ಒಂದಿಷ್ಟೂ ಸತ್ಯಾಂಶ ಇರುವುದಿಲ್ಲ ; ಅದು 'ಶುದ್ದ ಸುಳ್ಳು'
೨)  ಸಿಹಿ ಸುಳ್ಳು  ಅಂದ್ರೆ ಕೆಲವೊಮ್ಮೆ ನ ಪಾಸಾದ ವಿಧ್ಯಾರ್ಥಿ 'ನಾನು ಫಸ್ಟ್ ಕ್ಲಾಸ್ನಲ್ಲಿ ಪಾಸಾದೆ' ಅಂತ ತನ್ನ ಪೋಷಕರಿಗೆ ಹೇಳಿದಾಗ ಅವರಿಗಾಗುವ ಆನಂದ ಹೇಳತೀರದು ಅಲ್ವೇ ?
೩)  ಕಹಿ ಸುಳ್ಳು  ಅಂದ್ರೆ ನಿಮ್ಮ ಅಜ್ಜಿಗೆ ಸೀರಿಯಸ್ ಅಂತ ಮೆಸೇಜ್ ಕೊಡ್ತಾರೆ , ಆದ್ರೆ ಅಜ್ಜಿ ಶಿವ ಪಾದ ಸೇರಿ ಕೊಂಡು ಗಂಟೆಗಳೇ ಕಳೆದಿರುತ್ತೆ; ಯಾಕೆಂದ್ರೆ ಸಾವಿನ ಸುದ್ದಿ ಇನ್ನೂ ಕಹಿಯಾಗಿರುತ್ತೆ, ಜೀರ್ಣಿಸಿಕೊಳ್ಳಲು ಕಷ್ಟ ಅಲ್ವೇ ?
೪) ಯಾರನ್ನೇ ಅಗಲಿ ಅವರನ್ನು ಸಂಕಷ್ಟ ದಿಂದ ಪಾರು ಮಾಡಲು ಒಂದು ಸುಳ್ಳು ಹೇಳಿದರೆ ಅಡ್ಡಿ ಇಲ್ಲ ಅಲ್ವೇ ? ಒಮ್ಮೆ ಸನ್ಯಾಸಿ ಯೊಬ್ಬ ಧ್ಯಾನದಲ್ಲಿರುವಾಗ ಒಬ್ಬ ಬಡಪಾಯಿ ಪ್ರಾಣ ಭೀತಿ ಇಂದ ಬಂದು ಅವನಲ್ಲಿ ಆಶ್ರಯ ಪಡೆಯುತ್ತಾನೆ , ಆಗ ಒಬ್ಬ ಅವನನ್ನು ಕೊಲ್ಲಲು ಹುಡುಕಿಕೊಂಡು ಬಂದಾಗ ಅವನು ನಮ್ಮ ಆಶ್ರಮದಲ್ಲಿ ಇಲ್ಲ ಎಂದು ಆ ಸನ್ಯಾಸಿ ಸುಳ್ಳು ಹೇಳಿ ಅವನ ಪ್ರಾಣ ಕಾಪಾಡುತ್ತಾನೆ!
೫) ಅದೇ ರೀತಿ ಯಾರಿಗಾದರೂ ಸಹಾಯ ಮಾಡ ಬೇಕಾದಾಗ ಒಂದು ಸುಳ್ಳು ಸೃಷ್ಟಿಸಿ ಅವರಿಗೆ ಸಹಾಯ ಮಾಡುವುದರಲ್ಲಿ ಅರ್ಥ ಇದೆ ಅಲ್ವೇ ?
೬) ಮತ್ತೆ ನಮ್ಮೆ ಹಿರಿಯರು ಹೇಳಿದ್ದಾರೆ  ಸಾವಿರ ಸುಳ್ಳು ಹೇಳಿ 'ಮದುವೆ' ಮಾಡ ಬೇಕು ಅಂತ ; ಹಾಗಂದ್ರೆ ಸಾವಿರ ಸುಳ್ಳು ಹೇಳಿ ಅಂತಲ್ಲ ! ಒಂದು ಶುಭ ಕಾರ್ಯಕ್ಕೆ ಸುಳ್ಳು ಹೇಳಿದರೆ ಅಡ್ಡಿ ಇಲ್ಲ ಅಲ್ವೇ?
೭) ಇನ್ನು ಹುಟ್ಟು ಸುಳ್ಳು ಅಂದ್ರೆ ; ಕೆಲವರು ಹುಟ್ಟಿನಿಂದ ಸುಳ್ಳು ಹೇಳೋ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ ; ಅದೇ 'ಹುಟ್ಟು ಸುಳ್ಳು'

ಹಾಗೆ ಬರೆಯುತ್ತಾ ಹೋದರೆ ನಾನು ಕೂಡ ಸುಳ್ಳಿನ 'ಸರ ಮಾಲೆ' ಪೋಣಿಸಬೇಕಾಗುತ್ತೋ ಏನೋಪ್ಪ !  ಬೇಡ ಬೇಡಾ ಸಧ್ಯಕ್ಕೆ ಇಲ್ಲಿಗೆ ನನ್ನ 'ಸುಳ್ಳಿನ ಪುರಾಣ ' ಕ್ಕೆ ಇತಿಶ್ರೀ ಹಾಡುತ್ತೇನೆ
ಜೈ ಪುಂಡರೀಕ ವರದೇ ...............ಹರ ಹರ ಮಹಾದೇವ್ !!!!  

Wednesday 18 September 2013

ಏನಿದೀ ವೈಪರಿತ್ಯ !!!!!!







ಆಗೊಂದಿತ್ತು  ಕಾಲ

''ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ '' ಎಂದು












ಆದರೀ ಗಾಯಿತು .....  ಕಾಲ

''ಗಂಡ ಹೆಂಡಿರ ಜಗಳ ಕೊಚ್ಚಿ ಕೊಲ್ಲುವವರೆಗೆ'' ಎಂದು !!!!

ಏನಿದೀ ವೈಪರಿತ್ಯ !!!!!!

ಇದಕ್ಕಿಲ್ಲವೇ ಅಂತ್ಯ ????







ಫ್ಯಾಷನ್ 



ಮುಪ್ಪು ಆವರಿಸಿದಾಗ ಕಪ್ಪು ಕೂದಲು ಬಿಳಿಯದಾಗುತ್ತೆ
ಅದನ್ನ ಮತ್ತೆ ಕಪ್ಪಾಗಿಸ ಬೇಕೆಂದ್ರೆ ಹಚ್ಚಿ ಗಾರ್ನಿಯರ್ ಕೂದಲ ಬಣ್ಣ
'ಆದ್ರೆ '   ತಾರುಣ್ಯ ದಲ್ಲೇ  ಕಪ್ಪು ಕೂದಲು ಬಿಳಿಯದಾದ್ರೆ
ತಲೆ ಕೂದಲು ನುಣ್ಣಗೆ ಬೋಳಿಸಿದರೆ ಅದೇ ಹೊಸ  'ಫ್ಯಾಷನ್' ಅಣ್ಣ