Friday, 20 September 2013

ದುಃಸ್ವಪ್ನ !!!!!
ಇತ್ತೀಚಿಗೆ ಯಾಕೋ ತಿಳಿಯದು ಭಯಂಕರ ಕನಸು ಮೇಲಿಂದ ಮೇಲೆ ಬೀಳ್ತಾ ಇದೆ.  ಹಿಂದೆಲ್ಲ ಏನಾದ್ರೂ ಕನಸ್ಸು ಅಂದರೆ 'ಸುಂದರ ಸ್ವಪ್ನ' ಕಂಡರೆ ಮನಸ್ಸಿಗೆ ಮುದ ನೀಡ್ತಾ ಇತ್ತು, ಮನಸ್ಸು ಉಲ್ಲಾಸಮಯ ಎನ್ನಿಸಿ ಆ ಕನಸನ್ನೇ ಮೆಲುಕು ಹಾಕುವಂತ ಮಾಡ್ತಾ ಇತ್ತು .  ಆದ್ರೆ ಅದ್ಯಾಕೋ ತಿಳಿಯದು ನಾನು ಪ್ರತಿ ನಿತ್ಯ ಮಲಗುವಾಗ 'ರಾಮ ಸ್ಕಂದಂ ಹನುಮಂತಂ ವೈನತೆಯಮ್  ವ್ರುಕೊದರಮ್  ಶಯನೆಯ ಸ್ಮರೆ ನಿತ್ಯಂ ದುಃಸ್ವಪ್ನಂ  ತಷ್ಯ ನಶ್ಯತಿ'  ಎಂದು ಪಠಣ ಮಾಡಿಯೇ ಮಲಗುತ್ತೆನೆ.  ಆದರೂ ಸಹಾ ನಿನ್ನೆ ರಾತ್ರಿ ಭಯಂಕರವಾದ ಕನಸೊಂದು ಕಂಡೆ ಸ್ನೇಹಿತರೆ. '೩ ಕೆ ಬ್ಲಾಗ್' ನ ಸಹೃದಯರು 'ಶತಮಾನಂಭಾವತಿ' ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಒಂದು ಆಮಂತ್ರಣ ನೀಡಿದ್ದರು. ನಾನು ಕೂಡ ಖುಷಿ ಇಂದ ಕುಣಿದಾಡಿದೆ. ವಿಶೇಷ ಏನಪ್ಪಾ ಅಂದರೆ ಬಿಡುಗಡೆ ಸಮಾರಂಭದ ನಂತರ ' ೩ ಕೆ ಬ್ಲಾಗ್' ನ ಎಲ್ಲ ಸದಸ್ಯರು ಒಂದೇ ಸೂರಿನಡಿ ಸೇರಿ 'ಕವಿತಾ ವಾಚನ' ಹಾಗೂ ಸ್ರಜನಶೀಲ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ವಾದವನ್ನು ಮಂಡಿಸಬಹುದು ಎಂಬುದಾಗಿತ್ತು. ನನಗೆ ಈ ರೀತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಬಹಳಾ ಖುಷಿ ಕೊಡುವ ವಿಚಾರ. ಸರಿ ಹೊರಡುವ ದಿನ ಅಂದರೆ ಕಾರ್ಯಕ್ರಮ ನಡೆಯುವ ದಿನ ಬಂತು. ನಾನು ನನಗೆ ಪ್ರಿಯವಾದ ಕೆಂಪು ಬಣ್ಣದ ಸೀರೆಯುಟ್ಟು, ಅದಕ್ಕೆ ಒಪ್ಪುವ ಬಳೆಗಳನ್ನು ತೊಟ್ಟು, ಹೂ ಮುಡಿದು ಹೊರಡಲು ರೆಡಿ ಆದೆ. ಇನ್ನೇನು ಬಸ್ ಸ್ಟಾಪ್ ಸಮೀಪಿಸುತ್ತಿದಂತೆ ಒಂದು ದೊಡ್ಡ ಕೊಂಬಿನ ಹೊರಿಯೊಂದು ನನ್ನನೇ ದೃಷ್ಟಿಸಿ ನೋಡುತ್ತಾ ಓಡಿಸಿಕೊಂಡು ಬಂತು. ನಾನು ಹೆದರಿ ಓಡಿದೆ, ಯಾಕೆಂದರೆ ಸ್ನೇಹಿತರೆ ನಿಮಗೆಲ್ಲ ತಿಳಿದಂತೆ ಹೋರಿಗಳಿಗೆ ಕೆಂಪು ಬಣ್ಣ ಕಂಡರೆ ಅಟ್ಟಿಸಿಕೊಂಡು ಓಡಿ ಬಂದು ಕೊಂಬಿಂದ ತಿವಿದು ಹಾಕುತ್ತದೆ ಎಂದು ನಮ್ಮಜ್ಜಿ ಕೂಡ ಆಗಾಗ ಹೇಳುತ್ತಿದ್ದರು. ಅದು ಅಲ್ಲದೆ ಡಾ.  ರಾಜ್ ಅಭಿನಯದ 'ಬಂಗಾರದ ಮನುಷ್ಯ' ಚಿತ್ರದ ಭಾರತಿ ಅವರ ಚಿತ್ರ ನನ್ನೆದುರು ಬಂತು. ಓಡಿ ಓಡಿ ಅಂತು ಇಂತೂ ಪಾರಾದೆ. ನನ್ನ ಪುಣ್ಯಕ್ಕೆ ಬಸ್ ಕೂಡ ಸಿಕ್ಕಿತು. ನಿರ್ವಾಹಕರು ಎಲ್ಲಿಗಮ್ಮ ಎಂದು ಕೇಳಿದ್ದು ಎರಡನೇ ಅಪಶಕುನ ನನಗೇಕೋ ಸ್ವಲ್ಪ ಹೊತ್ತು ಮನೆಗೆ ಹೋಗಿ ೫ ನಿಮಿಷ ಕಳೆದು ಮತ್ತೆ ಹೊರಡೋಣ ಯಾಕೋ ಶಕುನ ಸರಿ ಇಲ್ಲ ಅನ್ನಿಸಿತು. ಆದರೆ ಅ ಭಯಾನಕ ಹೋರಿಯ ಚಿತ್ರಣ ಕಣ್ಮುಂದೆ ಬಂದು ಬೇಡಪ್ಪ ಎಂದು ಹೆದರಿಕೊಂಡೇ ಬಸ್ ಪ್ರಯಾಣ ಮುಂದುವರಿಸಿದೆ. ಮುಂದಿನ ನಿಲ್ದಾಣ ಸೇರುವ ಮೊದಲೇ ಯಾರೋ ಒಬ್ಬ ವಾಹನ ಸವಾರ ಅಡ್ಡ ದಿಡ್ಡಿ ಬಂದು ನಮ್ಮ ಬಸ್ಗೆ ಹೊಡೆದ ಅವನು ಕೆಳಗೆ ಬಿದ್ದ ಪುಣ್ಯಕ್ಕೆ ಏನೂ ಅನಾಹುತ ಸಂಭವಿಸಲಿಲ್ಲ. ದೇವ್ರೇ! ದೇವ್ರೇ! ಸುರಕ್ಷಿತವಾಗಿ ಹೋಗುವಂತೆ ಮಾಡಪ್ಪ ಎಂದು ಮನಸಿನಲ್ಲಿ ಪ್ರಾರ್ಥಿಸುತ್ತ ಶ್ರೀ ಕನಕದಾಸರ ವಿರಚಿತ 'ಕೇಶವ ನಾಮ' ಮನಸಿನಲ್ಲಿ ಹೇಳಿ ಕೊಳ್ಳುತ್ತಾ ಕಣ್ಮುಚ್ಚಿ ಕುಳಿತ್ತಿದ್ದೆ. ಸ್ನೇಹಿತರೆ ಒಂದು ಕ್ಷಣದಲ್ಲಿ ಅದೇನಾಯಿತೋ ನನಗರಿವಿಲ್ಲ ನಾನು ಮತ್ತು ನನ್ನ ಸಹ ಪ್ರಯಾಣಿಕರು ಅದ್ಯಾವುದೋ ಆಸ್ಪತ್ರೆಯಲ್ಲಿ ಹಾಸಿಗೆ ಮೇಲೆ ಮಲಗಿದ್ದೇವೆ. ನನಗೆ ಹಾಸಿಗೆ ಇಂದ ಏಳಲು ಪ್ರಯತ್ನಿಸಿದರೆ ಕಾಲಲ್ಲಿ ಶಕ್ತಿಯೇ ಉಡುಗಿ ಹೋಗಿದೆ , ನನ್ನ ಪಕ್ಕದ ಬೆಡ್ ನವರು ಹೇಳುತ್ತಿದ್ದರು 'ಪಾಪ ನೋಡಿ ಈಕೆಗೆ ಕಾಲೇ ಹೋಗಿದೆಯಂತೆ ' ಅಯ್ಯೋ ದುರ್ದೈವವೇ ಇದೆನಾಯಿತು ನನ್ನನು ಯಾಕೆ ಈ ರೀತಿ ಪರೀಕ್ಷಿಸುತ್ತಿರುವೆ ಶ್ರೀ ಕೃಷ್ಣ ಎಂದು ಕೂಗಿ ಕೊಂಡೆ. ಮತ್ತೆ ಎದ್ದು ಕಣ್ಣು ಬಿಟ್ಟು ನೋಡುತ್ತೇನೆ ನಾನು ನಮ್ಮ ಮನೆಯಲ್ಲೇ, ನನ್ನ ಹಾಸಿಗೆಯಲ್ಲೇ ಇದ್ದೇನೆ. ಅಬ್ಬ ಯಾಕಿಂತ ದುಸ್ಸ್ವಪ್ನ ತಿಳಿಯಲಿಲ್ಲ. ಆದರೆ ನನಗೆ ಅನ್ನಿಸಿದ್ದು ಕೈ, ಕಾಲು ಕಳೆದು ಕೊಂಡು ಬದುಕಿ ಎಲ್ಲರಿಗೂ ಹೊರೆಯಾಗುವುದಕ್ಕಿಂತ ಜೀವ ಹೋದರೆ ಲೇಸು ಅಲ್ಲವೇ ಸ್ನೇಹಿತರೆ; ಆದರೂ ನಮಗೆ ಬಂದದ್ದನ್ನು ಸ್ವೀಕರಿಸೋಣ.ಏನಂತೀರಿ?