Tuesday, 24 December 2013

ಗೋ ಮಾತೆ





ಗೋ ಮಾತೆ ಭೂಲೋಕದಲ್ಲಿರುವ ನಮ್ಮೆಲ್ಲರ ಸಲಹಮ್ಮ
ನಿನ್ನ ದರುಶನ ಮಾತ್ರದಿಂದ ಮುಕ್ಕೋಟಿ ದೇವತೆಗಳ ದರ್ಶನ
ದುರ್ಜನರ  ಶಿಕ್ಷಿಸಿ ; ಸಜ್ಜನರ ರಕ್ಷಿಸಮ್ಮ
ಕೆಟ್ಟವರನ್ನ ಕ್ಷಮಿಸಿ ; ಒಳ್ಳೆಯವರನ್ನ ಕಾಯಮ್ಮ
ಬಡವ-ಬಲ್ಲಿದ ಎಂಬುದನ್ನು ಹೋಗಲಾಡಿಸಿ
ಎಲ್ಲರಲ್ಲೂ 'ನಾವೆಲ್ಲಾ ಒಂದೇ ಎಂಬ ಭಾವನೆ ಮೂಡುವಂತೆ ಮಾಡಮ್ಮ
ನಾವೆಲ್ಲಾ  ಜಾತಿ ಒಂದೇ, ಕುಲ ಒಂದೇ,
ನಾವೆಲ್ಲಾ ಮನುಷ್ಯರು ಎಂಬ ಭಾವನೆ ಮೂಡಿಸಮ್ಮ
ಕೊಲೆ ,ಸುಲಿಗೆ, ಕಳ್ಳತನ, ದರೋಡೆ, ಶತ್ರುತ್ವ,
ಕೋಮು ಗಲಭೆ, ಆಕ್ರೋಶ ಇವನ್ನೆಲ್ಲ ಹೋಗಲಾಡಿಸಿ
'ಶಾಂತಿ ಮಂತ್ರ' ದ ಬೀಜವ ಬಿತ್ತಮ್ಮ
ನೀನು ನೀಡುವ ಹಾಲಿನಷ್ಟೇ ಶುಭ್ರವಾಗಿರಲಿ
ನಮ್ಮೆಲ್ಲರ ಮನಸ್ಸು ಎಂದು ಹಾರೈಸಮ್ಮ
ಭೂಲೋಕದಲ್ಲಿ ಎಲ್ಲೆಲ್ಲು ಸುಖ ಶಾಂತಿ ನೆಲೆಸುವಂತೆ ಮಾಡಮ್ಮ
ಇದು ನನ್ನ ಸವಿನಯ ಹಾಗು ಭಕ್ತಿ ಪೂರ್ವಕ ಬೇಡಿಕೆ
ಗೋ ಮಾತೆ  ನಿನಗೆ ನಮೋ ನಮಃ

Tuesday, 17 December 2013

ಈ ನರ ಜನ್ಮವೇಕೆ ಬೇಕು ??





ಹರಿಯ ನೆನೆಯದ ನರ ಜನ್ಮವೇಕೆ ,
ನರಹರಿಯ ಕೊಂಡಾಡದ ನಾಲಿಗೆ ಇನ್ನೇಕೆ
ಹರಿ ಪೂಜೆಯ ಮಾಡದ ಕರಗಳೇಕೆ
ಹರಿ ನಾಮ ಸ್ತುತಿಸದ ನಾಲಿಗೆ ಏಕೆ
ಹರಿ ನಾಮ ಆಲಿಸದ ಕಿವಿಗಳೇಕೆ
ಹರಿ ಸೇವೆಯ ಮಾಡದ ಜನ್ಮವೆಕೆ ???

Tuesday, 26 November 2013

ಮುತ್ತು+ ಐದು = ಮುತ್ತೈದೆ







ಕೆಂಪು ''ಕುಂಕುಮ'' ವಿರುವುದು 'ಹಣೆಗಾಗಿ'
ಹಸಿರು ''ಗಾಜಿನ ಬಳೆ'' ಗಳು 'ಕೈಗಳಿಗಾಗಿ'
ಹೊಳೆವ ''ಮೂಗುತಿ''  'ಮೂಗಿಗಾಗಿ'
''ಬೆಳ್ಳಿ ಕಾಲುಂಗುರ''  'ಕಾಲ್ಬೆರಳಿಗಾಗಿ'
ಹೊಳೆಯುವ ಚಿನ್ನದ ''ಮಾಂಗಲ್ಯ'' ಕೊರಳಿಗಾಗಿ
ಈ ಐದು ಮುತ್ತುಗಳು 'ಮುತ್ತೈದೆಯರಿಗಾಗಿ'

ತಲೆಯಲ್ಲಿ ಹೂ ಮುಡಿದು ; ಹೂವಿನಂಥ ನಗು ಮೊಗದಲ್ಲಿ
ಮುತ್ತು+ ಐದು = 'ಮುತ್ತೈದೆ' ಗೆ ಅರಿಶಿನ-ಕುಂಕುಮವೇ  ಭೂಷಣ 
ಮುತ್ತೈದೆ ಪೂಜೆ ಇಂದಲೇ  ಶುಭ-ಸಮಾರಂಭಗಳಿಗೆ  ಭೂಷಣ 
 ಹಿರಿ ಮುತ್ತೈದೆಯರಿಂದ ಆಶೀರ್ವಾದ ಪಡೆದಾಗ 
ಅವರ ಆ ಆಶೀರ್ವಚನ 'ಮುತ್ತೈದೆ ಸಾವಿತ್ರಿಯಾಗಿ' ಬಾಳಮ್ಮ 
ಎಂದು ಹರಸುವ ಅವರ ಆ ಹೃದಯ ವೈಶಾಲ್ಯತೆ
ಇವೆಲ್ಲವ ಕರುಣಿಸಿ ಹರಸಿದ ಆ ಭಗವಂತನಿಗೆ ಪ್ರಣಾಮಗಳು

Thursday, 7 November 2013

ಏನು ಫಲ ??







ಕತ್ತೆಗೇನು ಗೊತ್ತು ಕಸ್ತೂರಿ ಸುವಾಸನೆ ಎಂಬಂತೆ !
ಕತ್ತೆ ಮುಂದೆ ಕಸ್ತೂರಿ ಗಂಧ ಇಟ್ಟರೇನು ಫಲ???
ಕಿವುಡನಿಗೆ ಸಂಗೀತ ಕಚೇರಿಗೆ ಆಮಂತ್ರಿಸಿದರೇನು ಫಲ???
ಕುರುಡನಿಗೆ ರಮಣೀಯ ತಾಣಗಳಿಗೆ ಒಯ್ದರೇನು ಫಲ???
ಕುಂಟನು  ಓಡುವ  ಸ್ಪರ್ಧೆಯಲ್ಲಿ ಪಾಲ್ಗೊಂಡರೇನು ಫಲ ???
ವಿಷ ಪೂರಿತ ಹಾವಿಗೆ ಬೆಳ್ಳಿ ಬಟ್ಟಲಲ್ಲಿ ಹಾಲೆರೆದರೇನು  ಫಲ ???

Thursday, 31 October 2013

ಜೈ ಕನ್ನಡಾಂಬೆ ; ಜೈ ಕರುನಾಡು, ಜೈ ಹೊ ಕನ್ನಡ




ಮಕ್ಕಳಿಗೆ ಕನ್ನಡ ಅಭಿಮಾನ - ಬೆಳೆಯುವ ಪೈರು ಮೊಳಕೆಯಲ್ಲಿ ಅಂದಂತೆ
ಅವರ ತೊದಲು ಮಾತು ಕಲಿತ  ಕೂಡಲೇ 'ಅಮ್ಮ' ಎನ್ನಲು ಕಲಿಯುತ್ತಾರೆ
ಹಾಗೆ ಅಪ್ಪ, ಅಜ್ಜಿ, ಅಜ್ಜ, ಮಾಮ, ಅತ್ತೆ, ಅಣ್ಣ, ಅಕ್ಕ, ಚಿಕ್ಕಮ್ಮ, ಚಿ ಕ್ಕಪ್ಪ;
ಹೀಗೆ ಕರೆಯಲು ಹೇಳಿ ಕೊಡಬೇಕು ಅಲ್ಲವೇ ??
ಅದು ಬಿಟ್ಟು ಮಮ್ಮಿ, ಡ್ಯಾಡಿ, ಅಂಕಲ್ , ಆಂಟ್, ಎಂದೆಲ್ಲ ಕರೆದರೆ
ಅಮ್ಮ, ಅಪ್ಪ, ದೊಡ್ಡಪ್ಪ, ದೊಡ್ಡಮ್ಮ, ಎಂದು ಬಾಯಿ ತುಂಬ
ಪ್ರೀತಿ ತುಂಬಿ ಕರೆದ ಹಾಗಾಗುವುದಿಲ್ಲ !!!
ಚಿಕ್ಕಮ್ಮ, ದೊಡ್ಡಮ್ಮ, ಅತ್ತೆ, ಮತ್ತೆ ಅಕ್ಕ-ಪಕ್ಕದ ಮನೆಯವರಿಗೂ ಆಂಟಿ
ಚಿಕ್ಕಪ್ಪ, ದೊಡ್ಡಪ್ಪ, ಮಾವ ಮತ್ತೆ ಅಕ್ಕ-ಪಕ್ಕದ ಮನೆಯವರಿಗೂ ಅಂಕಲ್
ಇದ್ಯಾವ ಸೀಮೆ  ''ಅಂಕಲ್ -ಆಂಟ್' ನಾ ಬೇರೆ ಕಾಣೆ !!
ಕನ್ನಡ ಉಳಿಸಿ, ಬೆಳೆಸಿ, ಹಾಗೆ ಮನೆಯವರೆಲ್ಲ ಕನ್ನಡದಲ್ಲೇ ಸಂಭಾಷಿಸಿ 


ಕರ್ನಾಟಕ ದಲ್ಲಿ ಇರುವ ಪ್ರತಿಯೊಬ್ಬ ಕನ್ನಡಿಗರ ಮನೆ ಆಗಬೇಕು 
''ಕನ್ನಡಮ್ಮನ ದೇವಾಲಯ''
ಆಗ ಆಗುವುದು ನಮ್ಮೆಲ್ಲರ 'ಮನೆಯೇ ಮಂತ್ರಾಲಯ' ;
ಜೈ ಭುವನೇಶ್ವರಿ, ಜೈ ಕರ್ನಾಟಕ, ಜೈಕನ್ನಡಾಂಬೆ 


Monday, 28 October 2013






ಸವಿ ಸವಿ ನೆನಪು

ಅದೇ ಸೂರ್ಯ , ಅದೇ ಚಂದ್ರ, ಅದೇ ನಕ್ಷತ್ರ , ಅದೇ ಬಾನು
ಆದರೂ ಪ್ರತಿ ದಿನವನ್ನು ಹೊಸದಾಗಿ ನೋಡಿ;
ಅದೇ ಹಸಿರು, ಅದೇ ಉಸಿರು, ಅದೇ ಪ್ರಕೃತಿ, ಅದೇ ಪ್ರಪಂಚ
ಆದರೂ ಪ್ರತಿ ಕ್ಷಣವನ್ನು ಹೊಸದಾಗಿ ಆಸ್ವಾದಿಸಿ
ಅದೇ ಪಕ್ಷಿ ಸಂಕುಲ, ಅದೇ ತಂಗಾಳಿ, ಅದೇ ಉರಿ ಬಿಸಿಲು
ಆದರೂ ಪ್ರತಿ ಕ್ಷಣವನ್ನು ಹೊಸದಾಗಿಸಿ ಕೊಳ್ಳಿ ;
ಯಾಕೆಂದ್ರೆ ಮನುಷ್ಯ ಎಷ್ಟೇ ಹಣ ಸಂಪಾದಿಸಿದ್ರು
ಭೂಮಿಯ ಮೇಲೆ ನಮ್ಮೆಲ್ಲರ ಋಣ ಕಳೆದ್ರೆ
ಕೊನೆಗೆ ಉಳಿಯುವುದು ನಮ್ಮ-ನಿಮ್ಮ ನೆನಪು ಮಾತ್ರ
ಅದಕ್ಕೆ ನೆನಪುಗಳು ಯಾವಾಗ್ಲೂ
ಸವಿ-ಸವಿ ನೆನಪಾಗಿದ್ರೆ ಚೆಂದ !!

Friday, 25 October 2013



ನಾನು ಇಷ್ಟ ಪಡುವುದು :

ಪ್ರೀತಿ, ಪ್ರೇಮ,
ಮಮತೆ, ವಾತ್ಸಲ್ಯ,
ಸ್ನೇಹ, ಸಹನೆ,

ಹಿರಿಯರಲ್ಲಿ , ಭಯ, ಭಕ್ತಿ,
ಗೌರವ, ನಯ, ವಿನಯ,
ಮಾಧುರ್ಯತೆ ; ಸಂಕೋಚ,
ಪ್ರೀತಿ ತುಂಬಿದ ಕಣ್ಣುಗಳು
ಭಾವ ತುಂಬಿದ ಕಣ್ಣಾಲಿಗಳು
ಇಡಿ ಜಗತ್ತನ್ನೇ
ಪ್ರೀತಿಸುವ ಹೃದಯ
ಸುಂದರ ಪ್ರಪಂಚ !!!

ನಾನು ಇಷ್ಟ ಪಡದಿರುವುದು  


ಬಿಂಕ-ಬಿನ್ನಾಣ
ದ್ವೇಷ-ಕ್ರೌರ್ಯ
ಮದ-ಮತ್ಸರ,
ಸಿಟ್ಟು-ಸೆಡವು,
ಕೋಪ-ತಾಪ,

ಕೊಲೆ-ಸುಲಿಗೆ
ತಿರಸ್ಕಾರ
ತಾತ್ಸಾರ 
ಕ್ರೋದ
ಹೊಟ್ಟೆಕಿಚ್ಚು
ಹೊಟ್ಟೆ ಉರಿ
ಸುಡುಗಾಡು ಪ್ರರಂಚ ......





Tuesday, 22 October 2013

ಸಾರ್ಥಕತೆ








ಬಡತನದ ಬೇಗೆಯಲ್ಲಿ
ನೊಂದು ಬೆಂದು
ಬಳಲಿ ಬೆಂಡಾಗಿ
ಮದುವೆ ಆದ ಮೇಲೆ ಅತ್ತೆ-ಮಾವ,
ಗಂಡ, ಮಕ್ಕಳ ಸೇವೆ ಮಾಡಿ ಕೊಂಡು
ತನ್ನ ವೈಯುಕ್ತಿಕ ಯಾವುದೇ ಚಿಕ್ಕ ಪುಟ್ಟ
ಆಸೆಗಳನ್ನೂ  ಸಹಾ ಪೂರೈಸಿ ಕೊಳ್ಳಲಾಗದೆ
ಇಡಿ ಜೀವನವನ್ನು ಬಡತನದಲ್ಲಿ ಕಳೆದು
ಜೀವನದಲಿ ಜಿಗುಪ್ಸೆ ಹೊಂದಿ 
ಜೀವನ ದುಸ್ಸರ ಎನಿಸಿ
ಆತ್ಮ ಹತ್ಯೆ ಮಹಾ ಪಾಪ ಎಂದು ತಿಳಿದಿದ್ದರೂ
'ಆತ್ಮವನ್ನು ಹತ್ಯೆ' ಮಾಡಿಕೊಂಡೆ !!!!
ನೆರೆ-ಹೊರೆ, ಬಂಧು-ಬಳಗ ನೆಂಟರಿಷ್ಟರೆಲ್ಲಾ ಸೇರಿ
ನನ್ನ ಕೊನೆ ದರ್ಶನಕ್ಕಾಗಿ ಬಂದವರು ಹೇಳುತ್ತಿದ್ದದ್ದು ಹೀಗೆ
''ಆಹಾ ! ಈ ಮಹಾ ತಾಯಿ ಮುತ್ತೈದೆ ಸಾವೇ ಬೇಕೆಂದು
ಬಯಸಿ ಬಯಸಿ ಹೀಗೆ ಆತ್ಮ ಹತ್ಯೆಗೆ ಶರಣಾಗಿದ್ದಾಳೆ ''
ಮಹಾ ಪುಣ್ಯವಂತೆ ಎಂದೆಲ್ಲ ಹೊಗಳಿ ಹಾಡುತ್ತಿದ್ದುದು ಕೇಳಿ
''ಆತ್ಮಹತ್ಯೆ'' ಮಾಡಿ ಕೊಂಡದ್ದು ಸಾರ್ಥಕ ಆಯಿತು ಎನಿಸಿತು !!!




Wednesday, 25 September 2013

''ನೆರೆ ಹೊರೆ ಅಂದ್ರೆ ಒಬ್ರಿಗೊಬ್ರು ಆಗ್ಬೇಕು'' --- ಹರಿಕಥ ಶ್ರವಣ 3





.

''ನೆರೆ ಹೊರೆ ಅಂದ್ರೆ ಒಬ್ರಿಗೊಬ್ರು ಆಗ್ಬೇಕು'' ಎಂದು ಹಿಂದಿನ ಕಾಲದಿಂದಲೂ ನಮ್ಮ ಹಿರಿಯರು ಹೇಳಿರೋ ರೂಢಿ ಮಾತು.  ಹೌದು ನೆರೆ-ಹೊರೆಯವರ ಕಷ್ಟಕ್ಕೆ ಆಗ್ಬೇಕು ನಿಜ ಆದ್ರೆ ಅದು ದುರುಪಯೋಗ ಪಡಿಸ್ಕೊಬರ್ದು ಅಲ್ವೇ ?? ನಮ್ ಫ್ಯಾಮಿಲಿ ಯಲ್ಲಂತೂ ನಾವು ಚಿಕ್ಕಂದಿನಿಂದಲೂ ''ಹಾಸಿಗೆ ಇದ್ದಷ್ಟೇ ಕಾಲು ಚಾಚಿ '' ಅನ್ನೋ ಪಾಲಿಸಿಗೆ ಒಗ್ಗಿ ಹೋಗಿ ಬಿಟ್ಟಿದೀವಿ.  ಯಾಕೆಂದ್ರೆ ನಮ್ಮ ತಂದೆ ತಾಯಿ ಕಳಿಸಿದ ಪಾಠ ಅದು.  ''ಯಾವತ್ತೂ ನಮ್ಮ ಕೈ 'ಕೋ'  ಎನ್ನ ಬೇಕೇ ಹೊರತು 'ತಾ' ಅನ್ನ  ಬಾರದು '' ಎಂದು ನಮ್ಮ ತಂದೆ ಪದೇ ಪದೇ ಹೇಳಿ ನಮ್ಮನ್ನು ಅದೇ ರೀತಿ ಬೆಳೆಸಿದರು. ಅದು ಮೊದಲಿನಿಂದಲೂ ನಾವು ನಮ್ಮಲ್ಲಿ ರೂಡಿಸಿಕೊಂದು ನಮ್ಮಲಿ ರಕ್ತ-ಗತ ವಾಗಿ ಬಂದಿದೆ.  ನಮ್ ತಂದೆ ಹೇಳ್ತಿದ್ದರು ನಮಗೆ ಕಷ್ಟ ಬಂದಾಗ ಆ ಪರಮಾತ್ಮನ ಮೊರೆ ಹೋಗಬೇಕೆ ಹೊರತು ಹುಲು ಮಾನವರ ಮುಂದೆ ಸಹಾಯ ಹಸ್ತ ಚಾಚಬಾರದು; ಸಾಧ್ಯವಾದರೆ ನಮ್ಮ ಕೈಲಾದ ಸಹಾಯ ಮಾಡಬೇಕು ಎಂದು ಹೇಳುತ್ತಲೇ ಇದ್ದರು ನಮ್ ಅಪ್ಪಜಿ.  ಎಲ್ಲರ ಕಷ್ಟ-ಸಂಕಷ್ಟ ಗಳನ್ನೂ ಪರಿಹರಿಸೋನು ಆ ದಯಾಮಯ ಭಗವಂತ, ಅವನ ನಾಮಸ್ಮರಣೆ ಮಾಡಿ ಅವನಿಗೆ ಶರಣಾಗಿ ನಮ್ಮ ಕಷ್ಟಗಳೆಲ್ಲ ಪರಿಹಾರ ಆಗುತ್ತೆ ಪರಮಾತ್ಮನ ದಯೆ ಇಲ್ಲದೆ ಒಂದು ಹುಲ್ಲು ಕಡ್ಡಿ ಕೂಡ ಬೆಳೆಯೋಲ್ಲ ಅವನ ಇಚ್ಚೆಯಂತೆ ಎಲ್ಲ ನಡೆಯೋದು ಅದಕ್ಕೆ ಅವನಿಗೆ ಶರಣಾದರೆ ಅವನೇ ದಾರಿ ತೋರುತ್ತಾನೆ ಎಂದು ಹೇಳುತ್ತಲೇ ನಮ್ಮನ್ನು ಒಳ್ಳೆ ದಾರಿಯಲ್ಲಿ ಬೆಳೆಸಿ, ಒಳ್ಳೆ ಮಾರ್ಗದರ್ಶನ ನೀಡಿ ಬೆಳೆಸಿದ ನಮ್ಮನ್ನು ಹೆತ್ತವರಿಗೆ ''ಹಾಟ್ಸ್ ಆಫ್ '' ಹೇಳಲೇ ಬೇಕು.  ನಮ್ಮ ತಂದೆ-ತಾಯಿ ಮಾಡಿದ ಪುಣ್ಯ, ನಮ್ಮ ಹಿರಿಯರ ಆಶೀರ್ವಾದ  ದಿಂದ ಕಷ್ಟದಲ್ಲಿ ಬೆಳೆದು ಬಂದ್ರು ಸಹ ಈಗ ಆ ಪರಮಾತ್ಮನ ದಯೆ ಇಂದ ಒಳ್ಳೆ ಒಂದು ಮಟ್ಟದಲಿ ಅನುಕೂಲವಾಗಿ ಇದ್ದೇವೆ, ನಮ್ಮ ಕೈಲಾದ ಸಹಾಯ ಒಂದು ನಾಲ್ಕು ಜನರಿಗೆ ಮಾಡಿ ಸುಖ-ಶಾಂತಿ ಇಂದ ಬದುಕು ನಡೆಸುತ್ತಿದ್ದೇವೆ. 

ಈ ಪೀಠಿಕೆ  ಯಾಕೆ ಶುರು ಆಯಿತು ಎಂದರೆ ನಮ್ಮ ಪಕ್ಕದ ಮನೆಯ ಒಬ್ಬರು ಬಹಳ ತರಾತುರಿ ಇಂದ ಬಂದು '' ಮೇಡಂ ಏಟಿಎಂ probelem ದುಡ್ಡು ಡ್ರಾ ಮಾಡೋಕೆ ಆಗ್ತಾ ಇಲ್ಲ ಸ್ವಲ್ಪ ಅರ್ಜೆಂಟ್ ಹಾಗಾಗಿ ಸ್ವಲ್ಪ ದುಡ್ಡು ಬೇಕು ಒಂದು ಗಂಟೆ ಯಲ್ಲಿ ಡ್ರಾ ಮಾಡಿ ತಂದು ಕೊಡುತ್ತೇನೆ ಎಂದು ಹೇಳಿ ದುಡ್ಡು ತೆಗೆದು ಕೊಂಡು  ಹೋದೋರು ೧ ದಿನ ಆಯಿತು, ೨ ದಿನ ಆಯಿತು, ೨ ವಾರ ಆಯಿತು ಅವರ ಸುಳಿವಿಲ್ಲ !!!! ಈ ರೀತಿ ಸಮಯ ಸಾಧಕರಿಗೆ ಸುಳ್ಳು ಹೇಳಿ ದುಡ್ಡು ತೆಗೆದು ಕೊಳ್ಳುವ ಅದೆಂಥ ಪರಿಸ್ತಿತಿ ಇತ್ತೋ ನಾ ಬೇರೆ ಕಾಣೆ !  ಎಂಬಲ್ಲಿಗೆ ''ನೆರೆ ಹೊರೆ ಅಂದ್ರೆ ಒಬ್ರಿಗೊಬ್ರು ಆಗ್ಬೇಕು'' ---   ಹರಿ ಕಥಾ ಶ್ರವಣವು ಇಲ್ಲಿಗೆ ಸಮಾಪ್ತಿಯಾಗುವುದು.  ಜೈ ಪುಂಡರೀಕ ವರದೇ ...............ಹರ ಹರ ಮಹಾದೇವ್ !!!!






Saturday, 21 September 2013

'ಕೋಪವನ್ನು ನಿಗ್ರಹಿಸಿ' ......ಹರಿಕಥ ಶ್ರವಣ 2



ಕೋಪವೆಂಬುದು ಅನರ್ಥ ಸಾಧನವು ; ಕೋಪದಿಂದಲೇ ಜಗಳ , ಕದನ, ಕೊಲೆ, ಹೊಡೆದಾಟ, ಬಡಿದಾಟ ಎಲ್ಲವು.  ಕೋಪವನ್ನು ನಿಯಂತ್ರಿಸದಿದ್ದರೆ ದೊಡ್ಡ ದೊಡ್ಡ ಅನಾಹುತಗಳಿಗೆ ಎಡೆ ಮಾಡಿ ಕೊಡುವುದರಲ್ಲಿ ಎರಡು ಮಾತಿಲ್ಲ. ಸಂಬಂಧ ಗಳನ್ನು ಮುರಿದು ಒಬ್ಬರ ಮುಖ ಒಬ್ಬರು ನೋಡದಂತೆ ಮಾಡುವುದಕ್ಕೂ ಕಾರಣ ಈ 'ಕೋಪ' ಆದ್ದರಿಂದ ಕೋಪವನ್ನು ಹತೋಟಿಯಲ್ಲಿಟ್ಟರೆ  ಚೆನ್ನ.  ದೊಡ್ಡವರು ಹೇಳಿಲ್ಲವೇ ''ಕೋಪದಲ್ಲಿ ಹೋದ ಮೂಗು, ಶಾಂತವಾದ ಮೇಲೆ ಬಾರದು'' ಎಂದು'

ಕೋಪವನ್ನು ನಿಗ್ರಹಿಸದಿದ್ದಲ್ಲಿ ನೋವಿನ ಸುಳಿಗೆ ಸಿಲುಕಿ ನರಳ ಬೆಕಾಗುತ್ತೆ.  ಇದಕ್ಕೊಂದು ನೀತಿ ಕಥೆಯುಂಟು.

ಒಬ್ಬ ಹುಡುಗ ಮಹಾ ಕೋಪಿಷ್ಟ. ಸುಲಭವಾಗಿ ಕೆರಳುತ್ತಿದ್ದ. ಇದನ್ನು ಕಂಡು ರೋಸಿದ ತಂದೆ ತನ್ನ ಮಗನಿಗೆ ಒಂದು ಚೀಲ ತುಂಬಾ ಮೊಳೆಗಳನ್ನು ಕೊಟ್ಟು ಪ್ರತೀ ಸಲ ಕೋಪ ಬಂದಾಗ ಮನೆಯ ಹಿಂದಿನ ಗೋಡೆಗೆ ಒಂದು ಮೊಳೆ ಹೊಡೆಯುವಂತೆ ಹೇಳುತ್ತಾನೆ. ಉತ್ಸಾಹದಿಂದ ಹೋಗುವ ಹುಡುಗ ಮೊದಲ ದಿನವೇ ೪೫ ಮೊಳೆಗಳನ್ನು ಹೊಡೆದು ಹಾಕುತ್ತಾನೆ ಗೋಡೆಗೆ. ಒಂದೆರಡು ವಾರಗಳಲ್ಲಿ ತನ್ನ ಕೋಪ ತಾಪ ಎಲ್ಲಾ ತಹಬಂದಿಗೆ ಬಂದು ಗೋಡೆಗೆ ಹೊಡೆಯಬೇಕಾದ ಮೊಳೆಗಳು ಸಂಖ್ಯೆಯಲ್ಲಿ ಕಡಿಮೆಯಾಗುತ್ತವೆ. ತನ್ನ ಅಪ್ಪ ಹೇಳಿದ ಹಾಗೆ ಮೊಳೆ ಹೊಡೆಯುವುದಕ್ಕಿಂತ ಸುಲಭ ತನ್ನ ಕೋಪವನ್ನು ನಿಯಂತ್ರಿಸುವುದು ಎಂದು ಈ ಹೊತ್ತಿಗಾಗಲೇ ಹುಡುಗ ಅರಿತು ಕೊಳ್ಳುತ್ತಾನೆ. ಕೊನೆಗೊಂದು ದಿನ ಹುಡುಗ ಮೊದಲಿನ ಥರ ಕೋಪಿಷ್ಠನಾಗದೇ ಮಂದಸ್ಮಿತನಾಗುತ್ತಾನೆ, ಸಂಯಮಿಯಾಗುತ್ತಾನೆ, ಮೊಳೆಯ ಚೀಲ ಬರಿದಾಗುತ್ತದೆ. ಈ ವಿಷಯವನ್ನು ತನ್ನ ತಂದೆಗೆ ಬಂದು ಹೇಳಿದಾಗ ತಂದೆ ಹೇಳುತ್ತಾನೆ, ಮಗನೇ, ಈಗ ಹೋಗಿ ನೀನು ಹೊಡೆದ ಮೊಳೆಗಳನ್ನೆಲ್ಲಾ ದಿನಕ್ಕೊಂದರಂತೆ ಕೀಳು ಎಂದು. ಮತ್ತೊಮ್ಮೆ ಗೋಡೆ ಕಡೆ ಮರಳಿದ ಹುಡುಗ ಸಾವಧಾನದಿಂದ ದಿನಕ್ಕೊಂದರಂತೆ ಒಂದೊಂದೇ ಮೊಳೆ ಗಳನ್ನು ಕೀಳುತ್ತಾನೆ. ಒಂದೆರಡು ವಾರಗಳ ತರುವಾಯ ಹುಡುಗ ಬಂದು ತಾನು ಎಲ್ಲಾ ಮೊಳೆಗಳನ್ನು ಕಿತ್ತ ವಿಷಯ ಹಿಗ್ಗುತ್ತಾ ತಂದೆಗೆ ತಿಳಿಸುತ್ತಾನೆ. ಮಗನನ್ನು ನೋಡಿ ಮುಗುಳ್ನಗುತ್ತಾ ಅವನ ಕೈ ಹಿಡಿದು ಕೊಂಡು ಹಿತ್ತಲಿನ ಗೋಡೆಗೆ ಬಂದ ತಂದೆ ಮಗನ ತಲೆ ತಡವುತ್ತಾ ಹೇಳುತ್ತಾನೆ, ಮಗೂ, ಎಷ್ಟು ಸುಂದರ ಕೆಲಸ ನೀನು ಮಾಡಿದೆ, ಆದರೆ ನೋಡು ಒಮ್ಮೆ ಗೋಡೆಯನ್ನು. ಮೊದಲಿನ ಹಾಗಿದೆಯೇ ಗೋಡೆ? ಎಷ್ಟೊಂದು ತೂತುಗಳು ಬಿದ್ದಿವೆ ನೋಡು ಗೋಡೆಯ ಮೇಲೆ. ಈ ಗೋಡೆ ಮೊದಲಿನ ಹಾಗೆ ಆಗಲು ಸಾಧ್ಯವೆ? ಎಂದಿಗೂ ಇಲ್ಲ. ನೀನು ಕೋಪದಲ್ಲಿ ಆಡಿದ ಮಾತುಗಳೂ ಸಹ ಹಾಗೆಯೇ. ನಿನ್ನ ಕೋಪದ ಮಾತುಗಳು, ಜನರಿಗೆ ಮಾಡಿದ ನೋವು ನೀನು ಮೊಳೆಗಳಿಂದ ಗೋಡೆಗೆ ಮಾಡಿದ ತೂತುಗಳಂತೆ. ಅವೆಂದೂ ಮಾಸಲಾರವು. ಒಬ್ಬನಿಗೆ ಚೂರಿ ಇರಿದು ಆ ಚೂರಿಯನ್ನು ಹಿಂದಕ್ಕೆ ಎಳೆಯಬಹುದು, ಆದರೆ ಆ ಚೂರಿ ಮಾಡಿದ ಗಾಯ? ಆ ಗಾಯ ಮಾಸುವುದೇ? ನೀನೆಷ್ಟೇ ಕ್ಷಮೆ ಕೋರಿದರೂ ಆ ಗಾಯ ಅಲ್ಲೇ ಇರುತ್ತದೆ. ಹಾಗಾಗಿ ಕೋಪ  ಬಂದಾಗ ನಾವೇನೋ ಕೆಲಸ ಮಾಡ ಬೇಕಾದರೂ ಒಮ್ಮೆ ಯೋಚಿಸಿ ಮಾಡಬೇಕು, ಯಾರಿಗೂ ಅದರಿಂದ ನೋವುಂಟಾಗದಂತೆ ಎಚ್ಚರ ವಹಿಸಬೇಕು ಎಂದು ಬುದ್ಧಿ ಮಾತು ಹೇಳಿದರು.

ಅನರ್ಘ್ಯ ರತ್ನಗಳಂಥ ಮಾತುಗಳನ್ನು ತನ್ನ ಪ್ರೀತಿಯ ತಂದೆಯ ಬಾಯಿಂದ ಆಲಿಸಿದ ಹುಡುಗ ತಾನು ಇನ್ನು  ಮುಂದೆ ಯಾವತ್ತು ಕೋಪದ ಕೈಗೆ ಬುದ್ಧಿ ಕೊಡುವುದಿಲ್ಲ ಎಂದು ಪ್ರಮಾಣ ಮಾಡಿ ಅದರಂತೆ ನಡೆದುಕೊಂಡು ಒಳ್ಳೆಯ ಸತ್ಪ್ರಜೆ ಯಾಗಿ ತನ್ನ ತಂದೆಗೆ ತಕ್ಕ ಮಗನಾಗಿ ಸುಖ ಬಾಳ್ವೆ ನಡೆಸುತ್ತಾನೆ ಎಂಬಲ್ಲಿಗೆ 'ಉಮ ಕಾಂಡದ' ಎರಡನೇ ಹರಿ ಕಥಾ ಶ್ರವಣವು ಇಲ್ಲಿಗೆ ಸಮಾಪ್ತಿಯಾಗುವುದು.  ಜೈ ಪುಂಡರೀಕ ವರದೇ ...............ಹರ ಹರ ಮಹಾದೇವ್ !!!!

Friday, 20 September 2013

ದುಃಸ್ವಪ್ನ !!!!!




ಇತ್ತೀಚಿಗೆ ಯಾಕೋ ತಿಳಿಯದು ಭಯಂಕರ ಕನಸು ಮೇಲಿಂದ ಮೇಲೆ ಬೀಳ್ತಾ ಇದೆ.  ಹಿಂದೆಲ್ಲ ಏನಾದ್ರೂ ಕನಸ್ಸು ಅಂದರೆ 'ಸುಂದರ ಸ್ವಪ್ನ' ಕಂಡರೆ ಮನಸ್ಸಿಗೆ ಮುದ ನೀಡ್ತಾ ಇತ್ತು, ಮನಸ್ಸು ಉಲ್ಲಾಸಮಯ ಎನ್ನಿಸಿ ಆ ಕನಸನ್ನೇ ಮೆಲುಕು ಹಾಕುವಂತ ಮಾಡ್ತಾ ಇತ್ತು .  ಆದ್ರೆ ಅದ್ಯಾಕೋ ತಿಳಿಯದು ನಾನು ಪ್ರತಿ ನಿತ್ಯ ಮಲಗುವಾಗ 'ರಾಮ ಸ್ಕಂದಂ ಹನುಮಂತಂ ವೈನತೆಯಮ್  ವ್ರುಕೊದರಮ್  ಶಯನೆಯ ಸ್ಮರೆ ನಿತ್ಯಂ ದುಃಸ್ವಪ್ನಂ  ತಷ್ಯ ನಶ್ಯತಿ'  ಎಂದು ಪಠಣ ಮಾಡಿಯೇ ಮಲಗುತ್ತೆನೆ.  ಆದರೂ ಸಹಾ ನಿನ್ನೆ ರಾತ್ರಿ ಭಯಂಕರವಾದ ಕನಸೊಂದು ಕಂಡೆ ಸ್ನೇಹಿತರೆ. '೩ ಕೆ ಬ್ಲಾಗ್' ನ ಸಹೃದಯರು 'ಶತಮಾನಂಭಾವತಿ' ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಒಂದು ಆಮಂತ್ರಣ ನೀಡಿದ್ದರು. ನಾನು ಕೂಡ ಖುಷಿ ಇಂದ ಕುಣಿದಾಡಿದೆ. ವಿಶೇಷ ಏನಪ್ಪಾ ಅಂದರೆ ಬಿಡುಗಡೆ ಸಮಾರಂಭದ ನಂತರ ' ೩ ಕೆ ಬ್ಲಾಗ್' ನ ಎಲ್ಲ ಸದಸ್ಯರು ಒಂದೇ ಸೂರಿನಡಿ ಸೇರಿ 'ಕವಿತಾ ವಾಚನ' ಹಾಗೂ ಸ್ರಜನಶೀಲ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ವಾದವನ್ನು ಮಂಡಿಸಬಹುದು ಎಂಬುದಾಗಿತ್ತು. ನನಗೆ ಈ ರೀತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಬಹಳಾ ಖುಷಿ ಕೊಡುವ ವಿಚಾರ. ಸರಿ ಹೊರಡುವ ದಿನ ಅಂದರೆ ಕಾರ್ಯಕ್ರಮ ನಡೆಯುವ ದಿನ ಬಂತು. ನಾನು ನನಗೆ ಪ್ರಿಯವಾದ ಕೆಂಪು ಬಣ್ಣದ ಸೀರೆಯುಟ್ಟು, ಅದಕ್ಕೆ ಒಪ್ಪುವ ಬಳೆಗಳನ್ನು ತೊಟ್ಟು, ಹೂ ಮುಡಿದು ಹೊರಡಲು ರೆಡಿ ಆದೆ. ಇನ್ನೇನು ಬಸ್ ಸ್ಟಾಪ್ ಸಮೀಪಿಸುತ್ತಿದಂತೆ ಒಂದು ದೊಡ್ಡ ಕೊಂಬಿನ ಹೊರಿಯೊಂದು ನನ್ನನೇ ದೃಷ್ಟಿಸಿ ನೋಡುತ್ತಾ ಓಡಿಸಿಕೊಂಡು ಬಂತು. ನಾನು ಹೆದರಿ ಓಡಿದೆ, ಯಾಕೆಂದರೆ ಸ್ನೇಹಿತರೆ ನಿಮಗೆಲ್ಲ ತಿಳಿದಂತೆ ಹೋರಿಗಳಿಗೆ ಕೆಂಪು ಬಣ್ಣ ಕಂಡರೆ ಅಟ್ಟಿಸಿಕೊಂಡು ಓಡಿ ಬಂದು ಕೊಂಬಿಂದ ತಿವಿದು ಹಾಕುತ್ತದೆ ಎಂದು ನಮ್ಮಜ್ಜಿ ಕೂಡ ಆಗಾಗ ಹೇಳುತ್ತಿದ್ದರು. ಅದು ಅಲ್ಲದೆ ಡಾ.  ರಾಜ್ ಅಭಿನಯದ 'ಬಂಗಾರದ ಮನುಷ್ಯ' ಚಿತ್ರದ ಭಾರತಿ ಅವರ ಚಿತ್ರ ನನ್ನೆದುರು ಬಂತು. ಓಡಿ ಓಡಿ ಅಂತು ಇಂತೂ ಪಾರಾದೆ. ನನ್ನ ಪುಣ್ಯಕ್ಕೆ ಬಸ್ ಕೂಡ ಸಿಕ್ಕಿತು. ನಿರ್ವಾಹಕರು ಎಲ್ಲಿಗಮ್ಮ ಎಂದು ಕೇಳಿದ್ದು ಎರಡನೇ ಅಪಶಕುನ ನನಗೇಕೋ ಸ್ವಲ್ಪ ಹೊತ್ತು ಮನೆಗೆ ಹೋಗಿ ೫ ನಿಮಿಷ ಕಳೆದು ಮತ್ತೆ ಹೊರಡೋಣ ಯಾಕೋ ಶಕುನ ಸರಿ ಇಲ್ಲ ಅನ್ನಿಸಿತು. ಆದರೆ ಅ ಭಯಾನಕ ಹೋರಿಯ ಚಿತ್ರಣ ಕಣ್ಮುಂದೆ ಬಂದು ಬೇಡಪ್ಪ ಎಂದು ಹೆದರಿಕೊಂಡೇ ಬಸ್ ಪ್ರಯಾಣ ಮುಂದುವರಿಸಿದೆ. ಮುಂದಿನ ನಿಲ್ದಾಣ ಸೇರುವ ಮೊದಲೇ ಯಾರೋ ಒಬ್ಬ ವಾಹನ ಸವಾರ ಅಡ್ಡ ದಿಡ್ಡಿ ಬಂದು ನಮ್ಮ ಬಸ್ಗೆ ಹೊಡೆದ ಅವನು ಕೆಳಗೆ ಬಿದ್ದ ಪುಣ್ಯಕ್ಕೆ ಏನೂ ಅನಾಹುತ ಸಂಭವಿಸಲಿಲ್ಲ. ದೇವ್ರೇ! ದೇವ್ರೇ! ಸುರಕ್ಷಿತವಾಗಿ ಹೋಗುವಂತೆ ಮಾಡಪ್ಪ ಎಂದು ಮನಸಿನಲ್ಲಿ ಪ್ರಾರ್ಥಿಸುತ್ತ ಶ್ರೀ ಕನಕದಾಸರ ವಿರಚಿತ 'ಕೇಶವ ನಾಮ' ಮನಸಿನಲ್ಲಿ ಹೇಳಿ ಕೊಳ್ಳುತ್ತಾ ಕಣ್ಮುಚ್ಚಿ ಕುಳಿತ್ತಿದ್ದೆ. ಸ್ನೇಹಿತರೆ ಒಂದು ಕ್ಷಣದಲ್ಲಿ ಅದೇನಾಯಿತೋ ನನಗರಿವಿಲ್ಲ ನಾನು ಮತ್ತು ನನ್ನ ಸಹ ಪ್ರಯಾಣಿಕರು ಅದ್ಯಾವುದೋ ಆಸ್ಪತ್ರೆಯಲ್ಲಿ ಹಾಸಿಗೆ ಮೇಲೆ ಮಲಗಿದ್ದೇವೆ. ನನಗೆ ಹಾಸಿಗೆ ಇಂದ ಏಳಲು ಪ್ರಯತ್ನಿಸಿದರೆ ಕಾಲಲ್ಲಿ ಶಕ್ತಿಯೇ ಉಡುಗಿ ಹೋಗಿದೆ , ನನ್ನ ಪಕ್ಕದ ಬೆಡ್ ನವರು ಹೇಳುತ್ತಿದ್ದರು 'ಪಾಪ ನೋಡಿ ಈಕೆಗೆ ಕಾಲೇ ಹೋಗಿದೆಯಂತೆ ' ಅಯ್ಯೋ ದುರ್ದೈವವೇ ಇದೆನಾಯಿತು ನನ್ನನು ಯಾಕೆ ಈ ರೀತಿ ಪರೀಕ್ಷಿಸುತ್ತಿರುವೆ ಶ್ರೀ ಕೃಷ್ಣ ಎಂದು ಕೂಗಿ ಕೊಂಡೆ. ಮತ್ತೆ ಎದ್ದು ಕಣ್ಣು ಬಿಟ್ಟು ನೋಡುತ್ತೇನೆ ನಾನು ನಮ್ಮ ಮನೆಯಲ್ಲೇ, ನನ್ನ ಹಾಸಿಗೆಯಲ್ಲೇ ಇದ್ದೇನೆ. ಅಬ್ಬ ಯಾಕಿಂತ ದುಸ್ಸ್ವಪ್ನ ತಿಳಿಯಲಿಲ್ಲ. ಆದರೆ ನನಗೆ ಅನ್ನಿಸಿದ್ದು ಕೈ, ಕಾಲು ಕಳೆದು ಕೊಂಡು ಬದುಕಿ ಎಲ್ಲರಿಗೂ ಹೊರೆಯಾಗುವುದಕ್ಕಿಂತ ಜೀವ ಹೋದರೆ ಲೇಸು ಅಲ್ಲವೇ ಸ್ನೇಹಿತರೆ; ಆದರೂ ನಮಗೆ ಬಂದದ್ದನ್ನು ಸ್ವೀಕರಿಸೋಣ.ಏನಂತೀರಿ?

Thursday, 19 September 2013

ಸುಳ್ಳೇ ಸುಳ್ಳು ......ಹರಿಕಥ ಶ್ರವಣ 1




ಈ ನಮ್ಮ ಬಾಳು ಒಂದು ಚದುರಂಗದ ಆಟ ಇದ್ದ ಹಾಗೆ .. ಇಲ್ಲಿ ಕೆಲವೊಮ್ಮೆ ಗೆಲ್ಲಬೇಕು ಅಂದಾಗ ಸುಳ್ಳಿನ ಅವಶ್ಯಕತೆ ಇದ್ದೇ ಇರುತ್ತೆ...ಜೀವನದಲ್ಲಿ ಕೆಲವೊಮ್ಮೆ ಸುಳ್ಳು ಹೇಳದೆ ವಿಧಿ ಇಲ್ಲ ಅಂತಹ ಪರಿಸ್ತಿತಿ ಉದ್ಭವ ಆಗುತ್ತೆ  ; ಕಹಿಯಾದ ಸತ್ಯ ಹೇಳುವುದಕ್ಕಿಂತ , ಸಿಹಿ ಯಾದ ಸುಳ್ಳು ಬಹಳ ಹಿತವಾಗಿರುತ್ತೆಯಾರಿಗೂ ಅದರಿಂದ ತೊಂದರೆಯಾಗಲಿ, ಅನಾನುಕೂಲವಾಗಲಿ ಆಗುವುದಿಲ್ಲ.  'ಸತ್ಯಂ ಬ್ರೂಯಾದ್, ಪ್ರಿಯಂ ಬ್ರೂಯಾದ್, ನ ಬ್ರೂಯಾದ್ ಸತ್ಯಂ ಅಪ್ರಿಯಂ'
ಅಲ್ಲವೇ ? ಹಾಗಾಗಿ ಕೆಲವೊಮ್ಮೆ ಸತ್ಯ ಹೇಳೋದ್ರಿಂದ ತುಂಬಾ ಅನಾಹುತಗಳು, ಕಹಿ ಘಟನೆಗಳು, ಸಂಬಂಧ ಒಡೆದುಹೋಗುವಂತ ಘಟನೆಗಳು ನಡೆಯುತ್ತವೆ.  ಇಂತಹ ಪ್ರಸಂಗಗಳು ದಿನ ನಿತ್ಯ ಎಲ್ಲರ ಜೀವನದಲ್ಲೂ ನಡೆಯುತ್ತವೆ.  ವೈದ್ಯರು ಕೆಲವೊಮ್ಮೆ, ರೋಗಿಗಳು ಜೀವಂತವಾಗಿರಲು ಅವರ ಆಯಸ್ಸುಕೆಲವೇ ತಿಂಗಳು ಅಥವಾ ಕೆಲವೇ ದಿನಗಳೇ ಆಗಲಿ ಇರುವಾಗ ವೈದ್ಯರು ಅಂತಹ ಸಂಧರ್ಭಗಳಲ್ಲಿ ಸುಳ್ಳು ಹೇಳಲೇ ಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ ಹಾಗೂ  ಅನಿವಾರ್ಯವಾಗಬಹುದು. ರೋಗಿಯ ಬಂಧುಗಳಿಗೆ ನಿಜ ಹೇಳಲೇ ಬೇಕಾಗುತ್ತದೆ. ಆದರೆ ರೋಗಿಯ ಹತ್ತಿರ ಇಂತಹ ಕಹಿ ಸುಳ್ಳನ್ನು ಹೇಳಿ ಅವನ ಉಳಿದಿರುವ ಕೆಲವು ದಿವಸಗಳನ್ನು ಜೀವಂತ ನರಕ ಮಾಡುವುದು ಸರಿಯೇ?  ಅವನಿಗೆ ನಿಜಾಂಶ ತಿಳಿಸದೆ ಹೋದರೆ ಅವನು ಇನ್ನು ಸ್ವಲ್ಪ ಹೆಚ್ಚು ದಿನ ಬದುಕುಳಿಯಬಹುದು ಅಥವಾ ಅವನ ಅರೋಗ್ಯ ಸುಧಾರಿಸಿ ಚೇತರಿಸಿ ಕೊಳ್ಳಲೂ ಬಹುದು ! ರೋಗಿಯು ಬದುಕಿರುವನಕ ಅವನನ್ನು ಖುಷಿಯಾಗಿ ಇಟ್ಟು ಕೊಳ್ಳುವುದೇ ವೈದ್ಯರ ಧ್ಯೇಯ ಕೂಡ. ನೋಡಿ ಇದು ' ಒಳ್ಳೆ ಸುಳ್ಳು'  ಅಲ್ಲವೇ ಸ್ನೇಹಿತರೆ ??  ಹಾಗಾಗಿ ನಾನು ಈ ನಿರ್ಧಾರಕ್ಕೆ ಬಂದೆ ''ಕಹಿಯಾದ ಸತ್ಯ ಹೇಳುವುದಕ್ಕಿಂತ , ಸಿಹಿ ಯಾದ ಸುಳ್ಳು ಹೇಳುವುದೇ ಲೇಸು'' ಹಾಗೆ ಯೋಚಿಸುತ್ತ ಈ ಲೇಖನ ಬರೆಯಲು ಸ್ಪೂರ್ತಿ ಬಂತು !!

ಸುಳ್ಳು ಗಳಲ್ಲಿ ಹಲವು ವಿಧ.  ೧) ಶುದ್ದ ಸುಳ್ಳು ೨) ಸಿಹಿ ಸುಳ್ಳು ೩) ಕಹಿ ಸುಳ್ಳು ೪) ಸ0ಕಷ್ಟದಿಂದ ಪಾರು ಮಾಡೋ ಸುಳ್ಳು ೫) ಸಹಾಯ ಮಾಡಲು ಸೃಷ್ಟಿಸುವ ಸುಳ್ಳು ೬) ಸಾವಿರ ಸುಳ್ಳು ಹೇಳಿ 'ಮ ದು ವೆ'  ಮಾಡೋ ಸುಳ್ಳು
೭) ಹುಟ್ಟು ಸುಳ್ಳು ಇತ್ಯಾದಿ ಇತ್ಯಾದಿ ......
೧)  ಶುದ್ದ ಸುಳ್ಳು  ಅಂದ್ರೆ ಅದರಲ್ಲಿ ಒಂದಿಷ್ಟೂ ಸತ್ಯಾಂಶ ಇರುವುದಿಲ್ಲ ; ಅದು 'ಶುದ್ದ ಸುಳ್ಳು'
೨)  ಸಿಹಿ ಸುಳ್ಳು  ಅಂದ್ರೆ ಕೆಲವೊಮ್ಮೆ ನ ಪಾಸಾದ ವಿಧ್ಯಾರ್ಥಿ 'ನಾನು ಫಸ್ಟ್ ಕ್ಲಾಸ್ನಲ್ಲಿ ಪಾಸಾದೆ' ಅಂತ ತನ್ನ ಪೋಷಕರಿಗೆ ಹೇಳಿದಾಗ ಅವರಿಗಾಗುವ ಆನಂದ ಹೇಳತೀರದು ಅಲ್ವೇ ?
೩)  ಕಹಿ ಸುಳ್ಳು  ಅಂದ್ರೆ ನಿಮ್ಮ ಅಜ್ಜಿಗೆ ಸೀರಿಯಸ್ ಅಂತ ಮೆಸೇಜ್ ಕೊಡ್ತಾರೆ , ಆದ್ರೆ ಅಜ್ಜಿ ಶಿವ ಪಾದ ಸೇರಿ ಕೊಂಡು ಗಂಟೆಗಳೇ ಕಳೆದಿರುತ್ತೆ; ಯಾಕೆಂದ್ರೆ ಸಾವಿನ ಸುದ್ದಿ ಇನ್ನೂ ಕಹಿಯಾಗಿರುತ್ತೆ, ಜೀರ್ಣಿಸಿಕೊಳ್ಳಲು ಕಷ್ಟ ಅಲ್ವೇ ?
೪) ಯಾರನ್ನೇ ಅಗಲಿ ಅವರನ್ನು ಸಂಕಷ್ಟ ದಿಂದ ಪಾರು ಮಾಡಲು ಒಂದು ಸುಳ್ಳು ಹೇಳಿದರೆ ಅಡ್ಡಿ ಇಲ್ಲ ಅಲ್ವೇ ? ಒಮ್ಮೆ ಸನ್ಯಾಸಿ ಯೊಬ್ಬ ಧ್ಯಾನದಲ್ಲಿರುವಾಗ ಒಬ್ಬ ಬಡಪಾಯಿ ಪ್ರಾಣ ಭೀತಿ ಇಂದ ಬಂದು ಅವನಲ್ಲಿ ಆಶ್ರಯ ಪಡೆಯುತ್ತಾನೆ , ಆಗ ಒಬ್ಬ ಅವನನ್ನು ಕೊಲ್ಲಲು ಹುಡುಕಿಕೊಂಡು ಬಂದಾಗ ಅವನು ನಮ್ಮ ಆಶ್ರಮದಲ್ಲಿ ಇಲ್ಲ ಎಂದು ಆ ಸನ್ಯಾಸಿ ಸುಳ್ಳು ಹೇಳಿ ಅವನ ಪ್ರಾಣ ಕಾಪಾಡುತ್ತಾನೆ!
೫) ಅದೇ ರೀತಿ ಯಾರಿಗಾದರೂ ಸಹಾಯ ಮಾಡ ಬೇಕಾದಾಗ ಒಂದು ಸುಳ್ಳು ಸೃಷ್ಟಿಸಿ ಅವರಿಗೆ ಸಹಾಯ ಮಾಡುವುದರಲ್ಲಿ ಅರ್ಥ ಇದೆ ಅಲ್ವೇ ?
೬) ಮತ್ತೆ ನಮ್ಮೆ ಹಿರಿಯರು ಹೇಳಿದ್ದಾರೆ  ಸಾವಿರ ಸುಳ್ಳು ಹೇಳಿ 'ಮದುವೆ' ಮಾಡ ಬೇಕು ಅಂತ ; ಹಾಗಂದ್ರೆ ಸಾವಿರ ಸುಳ್ಳು ಹೇಳಿ ಅಂತಲ್ಲ ! ಒಂದು ಶುಭ ಕಾರ್ಯಕ್ಕೆ ಸುಳ್ಳು ಹೇಳಿದರೆ ಅಡ್ಡಿ ಇಲ್ಲ ಅಲ್ವೇ?
೭) ಇನ್ನು ಹುಟ್ಟು ಸುಳ್ಳು ಅಂದ್ರೆ ; ಕೆಲವರು ಹುಟ್ಟಿನಿಂದ ಸುಳ್ಳು ಹೇಳೋ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ ; ಅದೇ 'ಹುಟ್ಟು ಸುಳ್ಳು'

ಹಾಗೆ ಬರೆಯುತ್ತಾ ಹೋದರೆ ನಾನು ಕೂಡ ಸುಳ್ಳಿನ 'ಸರ ಮಾಲೆ' ಪೋಣಿಸಬೇಕಾಗುತ್ತೋ ಏನೋಪ್ಪ !  ಬೇಡ ಬೇಡಾ ಸಧ್ಯಕ್ಕೆ ಇಲ್ಲಿಗೆ ನನ್ನ 'ಸುಳ್ಳಿನ ಪುರಾಣ ' ಕ್ಕೆ ಇತಿಶ್ರೀ ಹಾಡುತ್ತೇನೆ
ಜೈ ಪುಂಡರೀಕ ವರದೇ ...............ಹರ ಹರ ಮಹಾದೇವ್ !!!!  

Wednesday, 18 September 2013

ಏನಿದೀ ವೈಪರಿತ್ಯ !!!!!!







ಆಗೊಂದಿತ್ತು  ಕಾಲ

''ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ '' ಎಂದು












ಆದರೀ ಗಾಯಿತು .....  ಕಾಲ

''ಗಂಡ ಹೆಂಡಿರ ಜಗಳ ಕೊಚ್ಚಿ ಕೊಲ್ಲುವವರೆಗೆ'' ಎಂದು !!!!

ಏನಿದೀ ವೈಪರಿತ್ಯ !!!!!!

ಇದಕ್ಕಿಲ್ಲವೇ ಅಂತ್ಯ ????







ಫ್ಯಾಷನ್ 



ಮುಪ್ಪು ಆವರಿಸಿದಾಗ ಕಪ್ಪು ಕೂದಲು ಬಿಳಿಯದಾಗುತ್ತೆ
ಅದನ್ನ ಮತ್ತೆ ಕಪ್ಪಾಗಿಸ ಬೇಕೆಂದ್ರೆ ಹಚ್ಚಿ ಗಾರ್ನಿಯರ್ ಕೂದಲ ಬಣ್ಣ
'ಆದ್ರೆ '   ತಾರುಣ್ಯ ದಲ್ಲೇ  ಕಪ್ಪು ಕೂದಲು ಬಿಳಿಯದಾದ್ರೆ
ತಲೆ ಕೂದಲು ನುಣ್ಣಗೆ ಬೋಳಿಸಿದರೆ ಅದೇ ಹೊಸ  'ಫ್ಯಾಷನ್' ಅಣ್ಣ

Tuesday, 20 August 2013









ದಿನ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ ನಿತ್ಯ ಬಳಕೆಯ ವಸ್ತುಗಳ  'ರೇಟು '
ಜನ ಸಾಮಾನ್ಯರ ಜೀವನದಲ್ಲಿ  ಏರು ಪೇರಾಗಿ ಬೀಳುತ್ತಿದೆ ಭಾರಿ   'ಏಟು'
ರೇಟಿನ ಏಟು ತಾಳಲಾರದ ಶ್ರೀ ಸಾಮಾನ್ಯ
ಆಗೇ ಹೋಗಿ ಬಿಟ್ಟ ಈ ರೇಟಿಗೆ    ''ಶರಣ್ಯ'' !


ವಿಚಿತ್ರ ಕನಸು !

 

 

 

 

 

 

 

ವಿಚಿತ್ರ ಕನಸು !


ಅಕ್ಕ ನಾನೊಂದು ಕನಸು ಕಂಡೆ 

ಆ ಕನಸಿನೊಳು 'ಆಸೆಯ ದೀಪ ' ಕಂಡೆ 

ಕಣ್ತೆರೆದು ನೋಡೇ ಅದೇ ನನ್ನ ದಹಿಸುವುದ ಕಂಡೆ 

ದೀಪದ ಉರಿಯೊಳು ನನ್ನ ದೇಹವೆಲ್ಲ ಬೆಂದು 

ಪ್ರಾಣ ಪಕ್ಷಿ ಹಾರಿ ಹೋದುದ ಕಂಡೆ 

ಯಾಕೀ ವಿಚಿತ್ರ ಕನಸ ಕಂಡೆ ? ? ?


Monday, 19 August 2013

ಮೇಕ್-ಅಪ್




ಮೇಕ್-ಅಪ್ 

ರೇಶಿಮೆ ಸೀರೆ ಉಟ್ಟು; ಮೈ ತುಂಬಾ ಒಡವೆ ತೊಟ್ಟು 
ಮದುವೆ  ಮನೆ ತುಂಬಾ ಓಡಾಡುತ್ತಿರುವ ನಾರಿ ಮಣಿಯರುಒಂದೆಡೆ ಆದರೆ 
ಇನ್ನೊಂದೆಡೆ ನಾಚಿಕೆ ಇಂದ ತಲೆ ತಗ್ಗಿಸಿ ಸುಂದರ ಯುವಕರಿಗಾಗಿ ಕಣ್ಣಲೇ ಬೇಟೆ ಆಡುವ
ಬಳುಕಿ ಕುಲುಕಿ ಯುವಕರ ಮನ ಸೆಳೆಯುವ ಕಿಶೋರಿಯರು , ನವ ತರುಣಿಯರು 
ಕಣ್ಣು ಕೋರೈಸುವ ತರಹೇವಾರಿ ರೇಶಿಮೆ ಸೀರೆಗಳು ಕಂಚಿ, ಧರ್ಮಾವರಂ, ಮೊಳಕಾಲ್ಮೂರು;
'ಮದುವೆ ಮನೆ' ಯಲ್ಲಿ ಹೆಂಗಳೆಯರ ಥಳುಕು-ಬಳುಕು ; ಒನಪು-ವೈಯ್ಯಾರ 
ಕಣ್ಣಿಗೆ ತುಂಬಾ ಹಿತವಾಗಿರುತ್ತೆ ;  ''ಮೇಕ್-ಅಪ್ '' ಮಿತವಾಗಿದ್ರೆ !!!!

ಹನಿ ಗವನ


ಹನಿ ಗವನ


ಹೆಲ್ತ್ ಇಸ್ ವೆಲ್ತ್

ದುಡಿದೂ ದುಡಿದೂ ಬ್ಯಾಂಕ್ನಲ್ಲಿ ಕೂಡಿಟ್ಟ  'ಹಣ '
ಆರೋಗ್ಯಕ್ಕಾಗಿ ಖರ್ಚು ಮಾಡದಿದ್ದರೆ ಆಗ್ತೀವಿ ಉಸಿರಾಡದ  'ಹೆಣ '
ಅದಕ್ಕೆ ಹೇಳೋದು ''ಆರೋಗ್ಯವೇ ಭಾಗ್ಯ'' ಅಲ್ವೆನಣ್ಣಾ ????

ಕ್ರೈಂ  ಫೈಲ್


ಆಗಿತ್ತು        -  ಗಂಡ ಹೆಂಡಿರ ಜಗಳ ಉಂಡು ಮಲಗುವ ವರೆಗೆ - ಎಂದು 
ಈಗಾಯಿತು -  ಗಂಡ ಹೆಂಡಿರ ಜಗಳ ಕೊಚ್ಚಿ ಕೊಲ್ಲುವ  ವರೆಗೆ    - ಎಂದು  !!!!


ನನ್ನ ಕಂದ

ನಾ ಕಂಡ ಕನಸೆಲ್ಲ 
ನುಚ್ಚು ನೂರಾಗಿ 
ಕಮರಿ ಹೋಗಿ 
ಬದುಕೇ  ಸಾಕೆನಿಸಿದಾಗ 
ಮತ್ತೆ 'ಬದುಕಿನ' ಮೊಳಕೆಯೊಡೆದು ಬಂದ 
ಮಮತೆಯ ಕುಡಿ 'ನನ್ನ ಮುದ್ದು ಕಂದ '

ಕನ್ನಡಮ್ಮನ  ಕೋರಿಕೆ

ಆಡಿ ಬಾ ನನ್ನ ಕನ್ನಡ ಕಂದ 
ಎಕ್ಕಡ ಎನ್ನಡ ಎಂದು ಹಂಗಿಸಬೇಡ 
ಎಲ್ಲಾದರೂ ಇರು ; ಹೇಗಾದರೂ ಇರು 
ಬೇರೆ ಭಾಷೆಯ ಜರಿಯದಿರು 
ಎಂದೆಂದೂ ಆಗಿರು 'ಕನ್ನಡದ ಕಂದ'
ಕನ್ನಡವ ಉಳಿಸಿ ಬೆಳೆಸು ನನ್ನ ಕಂದ

ಸ್ವಾರ್ಥಿ

ಸುರಿದಿದೆ ಜೋರಾಗಿ ಭಾರಿ ಮಳೆ
ಎಲ್ಲೆಲ್ಲೂ ಹರಿದಿದೆ ನೀರಿನ ಹೊಳೆ 
ರಾಜ್ಯದಲ್ಲೆಡೆ ಆಕ್ರಮಿಸಿದೆ 'ನೆರೆ ಹಾವಳಿ'
ಬಡವರಿಗೆ ಹೊಟ್ಟೆಗೆ ಹಿಟ್ಟಿಲ್ಲ ;ನಿಲ್ಲಲು ನೆಲೆ ಇಲ್ಲ
ಆದರೆ ಶ್ರೀಮಂತರ ಸ್ತಿತಿ  'ಯಥಾಸ್ತಿತಿ '
ಅವರ ಬಳಿ ಎಷ್ಟೇ ಸಿರಿ ಸಂಪತ್ತಿದ್ದರೂ 
ನಿರ್ಗತಿಕರಿಗೆ ಸಹಾಯ ಮಾಡದಿದ್ದರೆ
'ಏನಿದ್ದರೇನು ಫಲ ' ಎಂಬಂತೆ !!!
ಮನುಷ್ಯ ಇಷ್ಟೊಂದು ''ಸ್ವಾರ್ಥಿ'' ಯಾಕೆ ?????




Thursday, 15 August 2013





ಹೇ ತಾಯೇ 'ಅಷ್ಟ ಲಕ್ಷ್ಮಿ ' ಶ್ರೀ ಹರಿಯ ಸತಿ ನೀ
ಬೇಡುವೆನು ಹೇ ಮಾತೆ ತಾಯೆ ಸಲಹೆಮ್ಮ ನೀ
ಹಂಸಗಮನೆ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ನೀ 
ಗೆಜ್ಜೆಯ ನಾದವ ಕಿವಿಯಲಿ ತುಂಬುತ ಬಾರೆ ನೀ  
ನಿನ್ನ ಕಾಲಿನ ಕಿರು ಗೆಜ್ಜೆ ನಾದಕೆ ನರ್ತಿಸಲೇ ನಾ !!!
ಧನ ಲಕ್ಷ್ಮಿ,ಧಾನ್ಯ ಲಕ್ಷ್ಮಿ , ವಿದ್ಯಾ ಲಕ್ಷ್ಮಿ, ಧೈರ್ಯ ಲಕ್ಷ್ಮಿ, ಸಂತಾನ ಲಕ್ಷ್ಮಿ 
ನಿನ್ನ ದಯೆ ಇಂದ ಸಕಲ ಸೌಭಾಗ್ಯ ಗಳನ್ನೂ ಕೊಟ್ಟು 
ನನ್ನ ರಕ್ಷಿಸಿದೆಯಲ್ಲ ಹೇ ಮಾತೆ 
ನಿನಗೆ ನನ್ನ ಕೋಟಿ ಕೋಟಿನಮನಗಳು 



Wednesday, 14 August 2013

ಪ್ರಕೃತಿ ಸೌಂದರ್ಯ







ಪ್ರಕೃತಿ ಸೌಂದರ್ಯ

ನಾನೊಬ್ಬಳು ಸೌಂದರ್ಯ ಉಪಾಸಕಿ
ಪ್ರಕೃತಿ ಸೌಂದರ್ಯ ಸವಿಯುವ ಕಲೋಪಾಸಕಿ 
ಪ್ರಕೃತಿಯ ಮಡಿಲು ತಾಯಿಯ ಪ್ರೇಮದ ಒಡಲು 
ಜೀವನದಿ ಇನ್ನೇನು ಬೇಕು ತಾಯಿಯ ಆಸರೆ ಇರಲು 

ಪ್ರಕೃತಿಯ ಹಚ್ಚನೆ ಹಸಿರು 
ಕೋಗಿಲೆಯ ಕುಹೂ ಕುಹೂ
ನವಿಲಿನ ಬಾಗಿ ಬಳುಕುವ ನರ್ತನ 
ನೀರಿನಲ್ಲಿ ಮುಳುಗಿ ಮುಳುಗಿ ಏಳುವ 'ಹಂಸ '
ವಾಹ್ ! ಎಂತಹ ಸೊಬಗು ಈ ಧರೆ !
ಇಲ್ಲಿ ಜನ್ಮ ತಳೆದ ನಾನೇ ಧನ್ಯೆ !!!!
ಈ ಪ್ರಕೃತಿ ಸೌಂದರ್ಯ ಸವಿದಷ್ಟೂ 
ನನ್ನ ತೃಷೆ ಇಂಗುವುದಿಲ್ಲ ಎಳ್ಳಷ್ಟೂ !!




ಮುಗ್ದೆ

ಕಾಮನ ಬಿಲ್ಲಿನ ಬಣ್ಣಗಳ 
ಮೋಡಿಗೆ ಬೆರಗಾಗಿ ಮರುಳಾಗಿ 
ನಾ ಅದರ ಬೆನ್ನತ್ತಿ ಹೋದೆ 
ಕೈಗೆ ಸಿಗದೇ ನಿರಾಶಳಾದೆ!

ಬಿಳಿಯಾದುದ್ದೆಲ್ಲ ಹಾಲು
ಸಿಹಿಯಾದುದ್ದೆಲ್ಲ ಜೇನು 
ಎಂದೇ ತಿಳಿದ ಮುಗ್ಧೆ ನಾನು 
ಮತ್ತೆ ನಿರಾಶಳಾದೆ !!

ಕಡೆಗೆ ನಿಜಸ್ತಿತಿಯ ಅರಿವಾದಾಗ 
ಓಹ್ ನಾನೆಂಥಹ 'ಮುಗ್ಧೆ' ಎಂಬರಿವಾಗಿ
ಮತ್ತೆ ನಿರಾಶಳಾದೆ !!!







ಸ್ವಾರ್ಥಿ  ಮನುಜ


ಮನುಷ್ಯನ ಆಸೆಗಳು ಹುಚ್ಚುಚ್ಚು
ಹಚ್ಚಿ ಉರಿಸುತ್ತಿದೆ ಕಾಡಿಗೆ ಕಿಚ್ಚು
ಹಚ್ಚ ಹಸಿರಿನ ದಟ್ಟ ದಟ್ಟ ಕಾಡನ್ನು
ಮಚ್ಚು ಕೊಡಲಿಗಳಿಂದ ಕೊಚ್ಚಿ ಕೊಚ್ಚಿ
ಕೆಡವಿದೆಯಲ್ಲೋ ಎಲೆ ಹುಚ್ಚು ಮಾನವ
ನಿನಗೆ ಧಿಕ್ಕಾರವಿರಲಿ !

ಕಾಡಿನ ಹಸಿರನ್ನು ಹಾಳುಗೆಡವಿ ಧ್ವಂಸ  ಮಾಡುತ್ತಾ
ಮರಗಳನ್ನು ಉರುಳಿಸಿ ; ನಿನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾ
ಪ್ರಕೃತಿಯ ಸಂಪತ್ತನ್ನು ಧ್ವಂಸ ಮಾಡಿದೆಯಲ್ಲೋ
ಹೇ  ಸ್ವಾರ್ಥಿ  ಮನುಜ  ನಿನಗೆ ಧಿಕ್ಕಾರವಿರಲಿ !!

ನಗರದಲ್ಲೂ ನಿನ್ನ ಅಟ್ಟಹಾಸ ಮೆರೆದು
ಸಾಲು ಸಾಲು ಮರಗಳನ್ನು ಕೆಡವಿಸಿ
ಬಹು ಮಹಡಿ ಕಟ್ಟಡಗಳ ಕಟ್ಟಿ ಎತ್ತರಿಸಿ
ಪ್ರಕೃತಿಯ ಸೊಬಗ  ಕೆಡಿಸಿದೆ ಯಲ್ಲೋ
ಹೇ  ಸ್ವಾರ್ಥಿ  ಮನುಜ  ನಿನಗೆ ಧಿಕ್ಕಾರವಿರಲಿ !!




Tuesday, 6 August 2013

ಕಲಿಗಾಲ

ಪ್ರಪಂಚವೆಂಬ ಸಂತೆಯಲ್ಲಿ
ಲಂಚಕೋರರ ಕಳ್ಳ ಸಂತೆಯಲ್ಲಿ
ಗೋಮುಖ ವ್ಯಾಘ್ರರಂತಿಲ್ಲಿ
ಮುಖವಾಡವ ಧರಿಸಿದರಿಲ್ಲಿ
ಬಾಳುವಿರಿ ಹಾಯಾಗಿ ನೀವಿಲ್ಲಿ :

ನ್ಯಾಯಕ್ಕೆ ಕಾಲವಲ್ಲವಿ ಕಲಿಗಾಲವು
ಅನ್ಯಾಯಕಿಹ ಬೆಲೆ ನ್ಯಾಯಕಿಲ್ಲವು
ಸತ್ಯ ಧರ್ಮ ನ್ಯಾಯಗಳೆಲ್ಲ
ಗೋಮುಖ ವ್ಯಾಘ್ರರ ಕಾಲ ಮೆಟ್ಟುಗಲಾಗಿಹವು

ಅಂದು ಪುಣ್ಯಕೋಟಿ ನುಡಿಯಿತು
ಸತ್ಯವೇ ನಮ್ಮ ತಾಯಿ -ತಂದೆ
ಬಂಧು-ಬಳಗ ಸಕಲವೂ ಎಂದು
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಪರಮಾತ್ಮ ಮೆಚ್ಚನೆಂದು

ಪುಣ್ಯಕೋಟಿಯ ಮಾತು ಕೇಳಿ
ಅದರ ಸತ್ಯ ಸಂಧತೆಗೆ ಮೆಚ್ಚಿ
ಹುಲಿಯೇ ಪ್ರಾಣಾರ್ಪಣೆ ಮಾಡಿಕೊಂಡಿತು
ಆದರಿಂದು ಪುಣ್ಯ ಕೋಟಿ ಯಂಥ
ಸತ್ಯ ಸಂಧರಿಗೆ ಸಿಗುತಿರುವ ಬೆಲೆ ????
ಉಮಾ ಪ್ರಕಾಶ್

ಭೂದೇವಿಗೆ ನನ್ನ ನಮನ     



ಕೋಟಿ ಕೋಟಿ ಜೀವಿಗಳ ಹೊತ್ತು ನಿಂತಿಹ ಭೂದೇವಿಯೇ
ನೀನೇನೋ ಕ್ಷಮಯಾಧರಿತ್ರಿ
ನಿನ್ನ ತಾಳ್ಮೆಗೆ ಸರಿಯಲ್ಲ ಈ ಇಳೆಯು
ಪಾಪಿ ಮನುಜರ ಪಾಪದ ಕೊಡ ತುಂಬಿ ತುಳುಕುತಿದೆ
ನೀನೇನೋ 'ಕ್ಷಮಯಾಧರಿತ್ರಿ' ಎಂದು
ಮಾಡುವುದೇ ಪಾಪವ ಇಷ್ಟೊಂದು?
ತಾವೇನು ಮಾಡುತ್ತಿರುವೆವು ಎಂಬ ಅರಿವು
ಈ ಪಾಪಿ ಮನುಜರಿಗೆ ಇಲ್ಲವು !
ಮೂಕ ಪ್ರಾಣಿಗಳಿಗೆ ಕೊಡುವ ಹಿಂಸೆ ಏನು
ದೀನ ದಲಿತರಿಗೆ ಕೊಡುವ ನೋವೇನು ?
ಮೇಲು ಕೀಳು ಎಂಬ ಭೇದವೇನು?
ನಾನು ತಾನು ಎಂಬ ಅಹಂ ಏನು?
ಅವರ ತಪ್ಪಿಗೆ ಶಿಕ್ಷೆಯೇ ಇಲ್ಲವೇ?
ನೀನೇನೋ ಕ್ಷಮಯಾಧರಿತ್ರಿ ಎಂದು
ಮಾಡುವುದೇ ಪಾಪವ ಇಷ್ಟೊಂದು?
ನಿನ್ನ ತಾಳ್ಮೆಗೆ ಸರಿಯಲ್ಲ ಈ ಇಳೆಯು
ಹೇ ಭೂದೇವಿ ನಿನಗೆ ಇದೋ ನನ್ನ ನಮನ
ಉಮಾ ಪ್ರಕಾಶ್

ಕಲ್ಪನಾ ಲಹರಿ

 


                   ನಾನೊಂದು ಎಣಿಸಿದರೆ ದೈವದೆಣಿಕೆ ಬೇರೆಯೇ ಆಗಿತ್ತು! ! !
ನನ್ನೆಣಿಕೆ ಹೀಗಿತ್ತು .....................!!!
ನಾನೂ ''ನಾಟ್ಯ ರಾಣಿ ಶಾಂತಲೆ'' ಯಂತಾಗಬೇಕು
...ಗೆಜ್ಜೆ ಕಟ್ಟಿ ಕೊಂಡು ನವಿಲಿನಂತೆ ನರ್ತಿಸಿ
ಪ್ರೇಕ್ಷಕರಿಂದ ಬಿರುದು ಬಾವಲಿಗಳನ್ನು ಪಡೆದು
ಅವರ ಹೃನ್ಮನ ಗಳನ್ನೂ ಸೂರೆ ಗೊಳ್ಳಬೇಕು ಎಂದಿದ್ದೆ
ಆದರೆ ನನ್ನೆಣಿಕೆ ಹುಸಿಯಾಯಿತು !


ನಾನೂ ಶ್ರೇಷ್ಠ ಲೇಖಕಿ 'ತ್ರಿವೇಣಿ' ಯವರಂತೆ ಆಗಬೇಕು
ಕಥೆ ಕಾದಂಬರಿ ಗಳನ್ನೂ ರಚಿಸಿ
ಓದುಗರನ್ನು ನನ್ನ ಕಲ್ಪನೆಯ ಕಡಲಲ್ಲಿ ಮುಳುಗಿಸಿ
ಅವರ ಹೃನ್ಮನ ಗಳನ್ನೂ ಸೂರೆ ಗೊಳ್ಳಬೇಕು ಎಂದಿದ್ದೆ
ಆದರೆ ನನ್ನೆಣಿಕೆ ಹುಸಿಯಾಯಿತು !

ನಾನೂ ''ಗಾಯನ ವಿಧೂಷಿ ಎಂ ಎಸ್ ಸುಬ್ಬಲಕ್ಷ್ಮಿ' ಯವರಂತೆ ಆಗಬೇಕು
ನನ್ನ ಇನಿದಾದ ಕಂಠ ದಿಂದ ಹಾಡಿ
ಕೇಳುಗರನ್ನು ನನ್ನ ಸಂಗೀತದ ಸರೋವರದಲ್ಲಿ ತೇಲಿಸಿ
ಅವರ ಹೃನ್ಮನ ಗಳನ್ನೂ ಸೂರೆ ಗೊಳ್ಳಬೇಕು ಎಂದಿದ್ದೆ
ಆದರೆ ನನ್ನೆಣಿಕೆ ಹುಸಿಯಾಯಿತು !
ಉಮಾ ಪ್ರಕಾಶ್

Thursday, 25 July 2013



ಕಾಣದ ದೇವರು ಗುಡಿಯಲಿ ಸಾವಿರಾರು ಸಾವಿರಾರು
ಕಣ್ಣಿಗೆ ಕಾಣುವ ತಾಯಿ-ತಂದೆಯೇ ಮನೆಯಲ್ಲಿರುವ ದೇವರು
ಸುತ್ತಿ ಸುತ್ತಿ ಊರನ್ನೆಲ್ಲ ಗುಡಿಗೆ ಯಾಕೆ ಹೋಗುವಿರಿ
ಮೂರು ಸುತ್ತು ತಾಯಿ-ತಂದೆಯ ಸುತ್ತು ಸುತ್ತುವಿರಿ
ಆಗಲೇ ವೈಕುಂಟ-ಕೈಲಾಸ ಎಲ್ಲಾ ಸುತ್ತಿ ಬಂದಂತೆ
ವೈಕುಂಟವಿಲ್ಲೆ ಕೈಲಾಸವಿಲ್ಲೆ ಓ ನನ್ನ ಹೆತ್ತವರೇ
ಎಲ್ಲ ನಿನ್ನ ಪಾದದಲ್ಲೇ ಇರುವಾಗ ಗುಡಿ ಏಕೆ ಸುತ್ತಲಿ ?? 




Monday, 25 March 2013





ಹಾಳೆ - ಮೂರು :

ಒಮ್ಮೆ ಹೀಗೊಂದು ದಿನ ಲೈಬ್ರರಿ ಇಂದ ತಂದ 'ಸಣ್ಣ ಕಥೆಗಳ ಸಂಕಲನ' ಮನೆ ಇಂದ ಶಾಲೆಗೆ ಹೋಗುವ ದಾರಿಯಲ್ಲಿ ಓದುತ್ತ ನಡೆಯುತ್ತಿದ್ದೆ .  ಪುಸ್ತಕದಲ್ಲಿ ಹುದುಗಿ ಹೋಗಿದ್ದ ನನಗೆ ಯಾವುದರ ಪರಿವೆ ಇಲ್ಲದೆ ಪುಸ್ತಕ ಹಿಂತಿರುಗಿಸುವ ದಿನವಾದದರಿಂದ  ಓದಿ ಮುಗಿಸಲೇ ಬೇಕು ಎಂಬ ಛಲ ಇತ್ತು ಹಾಗಾಗಿ ಓದುತ್ತ ಸಾಗಿದ್ದೆ.  ೨-೩ ಕಿ. ಮಿ.  ದಾರಿ ಸವೆಯ ಬೇಕಿತ್ತು.  ಓದುತ್ತ ಓದುತ್ತ ಒಂದು ತೆರೆದ ಒಳ ಚರಂಡಿಗೆ ದೊಪ್ಪನೆ ಬಿದ್ದೆ ನೋಡಿ ; ಒಳ್ಳೆ ಪ್ರಪಾತಕ್ಕೆ ಬಿದ್ದ ಅನುಭವ!!   ನಾನು ಅಪ್ಪ ದೇವರೆ ಈ ಕಂದಕದಿಂದ ಹೊರ ಬರುವಂತೆ ಮಾಡು ನಿನಗೆ ೧೦೧  ನಮಸ್ಕಾರ ಹಾಕುತ್ತೆನೆ.  ಜೊತೆಗೆ ಹೆಜ್ಜೆ ನಮಸ್ಕಾರ, ೧ ೦ ೧  ಬಾರಿ  
' ಓಂ ಶ್ರೀ ಗಣೇಶಾಯ ನಮಃ '   ಎಂದು ಭಕ್ತಿ ಇಂದ ಬರೆಯುತ್ತೇನೆ ಎಂದು ಹರಸಿಕೊಂಡೆ.  ಯಾರಾದ್ರು ಕಾಪಾಡಿ ಎಂದು ಅರಚಿ ಅರಚಿ  ಗಂಟಲ್ಲೆಲ್ಲ ಒಣಗಿ ಹೋಗಿ ನೀರು ಕುಡಿಯಬೇಕೆನಿಸಿತು.  ಸುಮಾರು ತಾಸುಗಳೇ ಕಳೆದು ಹೋದವು .  ಕೊನೆಗೆ ಒಬ್ಬರು ವಯಸ್ಸಾದ ತಾತ  ಒಂದು ಹಗ್ಗವನ್ನು ಇಳಿ  ಬಿಟ್ಟು ಅದನ್ನು ಗಟ್ಟಿಯಾಗಿ ಹಿಡಿದು ಕೊಳ್ಳುವಂತೆ ಹೇಳಿದರು.  ಅವರ ಆ ಸಹಾಯ ನಾನು ಈಗಲೂ ಸ್ಮರಿಸುತ್ತೇನೆ.  ಕೊನೆಗೆ ಮೇಲೆ ಬಂದ ಮೇಲೆ ಯುನಿಫಾರ್ಮ್ ಎಲ್ಲ ಕೊಳೆಯಾಗಿತ್ತು .  ಇನ್ನು ಶಾಲೆಗೆ ಹೋಗುವುದರಲ್ಲಿ ಅರ್ಥ ಇಲ್ಲ ಎಂದು ಮನೆಗೆ ಓಡಿದೆ.  ಮನೆಗೆ ಹೋಗಿ ಅಮ್ಮನಿಗೆ ನಡೆದ ವಿಚಾರ ಎಲ್ಲ ವಿವರಿಸಿದೆ.  ಅಮ್ಮ ಬಿಸಿ ಬಿಸಿ ನೀರು ಹಂಡೆ ಇಂದ ಮೊಗೆದು ಮೊಗೆದೂ  ಸುರಿದರು.  ಮನಸ್ಸು ದೇಹ ಎಲ್ಲ ಹಾಯೆನಿಸಿತು.  ಮತ್ತೆಂದೂ ನಾನು ದಾರಿಯಲ್ಲಿ ಪುಸ್ತಕ ಓದುವ ಸಾಹಸ ಮಾಡಲಿಲ್ಲ!!!!!!!


ಮುಂದುವರಿಯುವುದು ...................   


Sunday, 24 March 2013



ಹಾಳೆ - ಎರಡು 

ಹಾಗೆ ನನ್ನ ಬಾಲ್ಯ ನನ್ನ ಸ್ಮೃತಿ ಪಟಲದಲ್ಲಿ ಅಚ್ಚಳಿಯದೆ ಬೇರೂರಿದೆ  ನಾನೋದಿದ ಕೆಲವೊಂದು ಪುಸ್ತಕಗಳು .  ಒಮ್ಮೆ 'ಅಲಿಬಾಬ ಮತ್ತು ನಲವತ್ತು ಮಂದಿ ಕಳ್ಳರು' ಪುಸ್ತಕ ಹಿಡಿದು ಕುಳಿತ್ತಿದೆ ; ಹಾಗೆ ಓದುತ್ತ ಓದುತ್ತ ನನ್ನ ಕಲ್ಪನೆಯಲ್ಲಿ ಅಲಿಬಾಬ ಕಥೆ ತುಂಬಾ ಚೆನ್ನಾಗಿ ಉಳಿದು ಹೊಯಿತು.  ನನ್ನ ಮಕ್ಕಳಿಗೆ ನಾನು ಚಿಕ್ಕಂದಿನಲ್ಲಿ ಓದಿದ ಎಲ್ಲ ಕತೆಗಳನ್ನು ಹೇಳುತ್ತಾ ಬಂದಿದ್ದೇನೆ.  ನನ್ನ ಕಥೆ ಹೇಳುವ ವೈಖರಿ ಕಂಡು ಒಮ್ಮೊಮ್ಮೆ ನಮ್ಮ ಅತ್ತೆ ಕೂಡ ''ಅಲ್ವೇ ಉಮ ಅದೆಷ್ಟು ಚೆನ್ನಾಗಿ ಕತೆ ಹೇಳುತ್ತೀಯ ನೀನು,  ನಂಗೆ ನಿದ್ದೆ ಬರ್ತಿಲ್ಲ ನಿನ್ ಕತೆ ಕೇಳಿದ್ರೆ ಒಳ್ಳೇ  ನಿದ್ರೆ ಬರುತ್ತೆ ನಂಗೂ ಕತೆ ಹೇಳು '' ಎಂದು ಎಷ್ಟೋ  ಬಾರಿ ನಾನು ಸಣ್ಣವಳಿದ್ದಾಗ  ಓದಿದ 'ಸಿನ್ ಡ್ರೆ ಲಾ',
'ಉದ್ದ ಕೂದಲಿನ ರಾಜ ಕುಮಾರಿ ಕತೆ',  'ಎರಡು ಗಿಳಿಗಳ ಕಥೆ' , 'ಕಪ್ಪೆ ರಾಜಕುಮಾರಿ ಕಥೆ' ಹಾಗೂ ಇನ್ನು ಮುಂತಾದ ಕಥೆಗಳನ್ನು ಅವರಿಗೆ ಹೇಳಿ ಅವರ ಮನಸಂತೋಶ  ಪಡಿಸುತ್ತಿದ್ದೆ .  ಆಗ ನನಗಾಗುತ್ತಿದ್ದ ಆನಂದ ಅಷ್ಟಿಷ್ಟಲ್ಲ.
ಮತ್ತೆ ಇನ್ನು ಖುಷಿಯ ವಿಚಾರ ಎಂದರೆ ನಾನು ಕ್ಲಾಸ್ ಲೀಡರ್ ಆಗಿದ್ದೆ ನಮ್ಮ ಗುರುಗಳು ಏನಾದ್ರೂ ವಿಶ್ರಾಂತಿ ತಗೋ ಬೇಕಾದಾಗ ' ಉಮಾ, ಸ್ವಲ್ಪ ಇಲ್ಲಿ ಬಾಮ್ಮಾ , ಒಂದು ಒಳ್ಳೆ ಕಥೆ ಹೇಳು ಮಕ್ಕಳನ್ನು ನಿಶ್ಯಬ್ದವಾಗಿ ಇರುವಂತೆ ಮಾಡ ಬೇಕಾದರೆ ನಿನ್ನ ಕಥೆಗಳೇ ರಾಮ ಬಾಣ. ಹಾಗಾಗಿ ನನಗೆ ಅದೊಂದು ಕಲೆ ಚಿಕ್ಕಂದಿನಲ್ಲೇ ಇತ್ತು.  ದೇವರ ನಾಮ ಹಾಡುವುದು, ಚಲನ ಚಿತ್ರ ಗೀತೆಗಳನ್ನು ಹಾಡುವುದು ,ಕಥೆ ಹೇಳುವುದು, ಇವೆಲ್ಲ ಹವ್ಯಾಸ ನನಗೆ ಚಿಕ್ಕಂದಿನಲ್ಲಿ ಬಂದ ಬಳುವಳಿ.  ಮತ್ತೆ ಎಲ್ಲದಕ್ಕೂ ಮೊದಲ ಬಹುಮಾನ ! 'ಆ ದಿನಗಳು' ಅದೆಂಥ ಸುಂದರ !!! ನನಗೆ ಮತ್ತೆ ಬಾಲ್ಯಕ್ಕೆ ಹೋಗ ಬೇಕೆನ್ನುವ ಆಸೆ.  ಆದರೂ ಅಡ್ಡಿ ಇಲ್ಲ ಬಾಲ್ಯದ ನೆನಪುಗಳು ನನ್ನಲ್ಲಿ ಇನ್ನು ಹಸಿರಾಗಿದೆ.   ಯಾವಾಗ ಬೇಕಿದ್ದರೂ ಕಲ್ಪನೆಯಲ್ಲಿ ಬಾಲ್ಯಕ್ಕೆ ತೆರಳಿ ಮತ್ತೆ ನನ್ನ ಈಗಿನ ಅವಸ್ತೆಗೆ ಮರಳುತ್ತೇನೆ.  ಒಮ್ಮೆ 'ಭಗೀರಥ ಪ್ರಯತ್ನ' ನಾಟಕದಲ್ಲಿ ನಾನು ಗಂಗೆಯಾಗಿ ಅಭಿನಯಿಸಿದ್ದೆ. ಭಗೀರಥ ಗಂಗೆಯನ್ನು ಇಳಿದು ಬಾ ಗಂಗೆ, ಇಳಿದು ಬಾ ಭುವಿಗೆ ಎಂದು ಹಾಡಿ ಕರೆಯುತ್ತಿದ್ದ, ನಾನು ಸ್ವಲ್ಪ ಎತ್ತರದಿಂದ ಇಳಿದು ಬರುವಂತೆ ವೇದಿಕೆ ನಿರ್ಮಿತವಾಗಿತ್ತು.  ಆಗೆಲ್ಲ ಶಾಲೆಯಲ್ಲಿ ಇದ್ದ ಬೆಂಚನ್ನೆ ಒಂದರ ಮೇಲೊಂದು ಮೆಟ್ಟಿಲಿನಂತೆ ಇಟ್ಟಿದ್ದರು, ನಾನು ಬಿಳಿ ಸೀರೆಯುಟ್ಟು, ಉದ್ದವಾದ ಹೆರಳು ಬಿಚ್ಚಿಕೊಂಡು ಬರುತ್ತಿರುವಾಗ ಬೆನ್ಚಿಂದ ಎಡವಿ ಬಿದ್ದೆ ಬಿಟ್ಟೆ !!! ಎಂತಹ ಅನಾಹುತ ಅಂತೀರಾ?? ಒಂದೆಡೆ ನನ್ನ ಉದ್ದವಾದ ಜಡೆ ಬೆಚಿಗೆ ಸಿಕ್ಕಿಹಾಕಿ ಕೊಂಡಿದೆ, ಇನ್ನೊಂದೆಡೆ ಸೀರೆಯ ಸೆರಗು ಸಿಕ್ಕಿ ಕೊಂಡಿದೆ.  ಒಳ್ಳೇ ಫಜೀತಿ ಸ್ವಲ್ಪ ಸಮಯ ಪರದೆ ಇಳಿಸಿದರು ; ನಂತರ ನಾಟಕ ಏನೋ ಚೆನ್ನಾಗಿ ಮೂಡಿ ಬಂತು; ಆದರೆ ನನ್ನ ಜಡೆ ಬಿಡಿಸಲಾರದೆ ಸ್ವಲ್ಪ ಕಟ್ ಮಾಡಿದರು ನಮ್ಮಮಿಸ್ !! ಅದನ್ನು ನೆನಪಿಸಿಕೊಂಡರೆ ಈಗ ನನ್ನ ಮೊಗದಲ್ಲಿ ಮುಗುಳ್ನಗೆ ಮಿಂಚಿ ಮಾಯವಾಗುತ್ತದೆ.  ಆಹಾ ಬಾಲ್ಯವೇ, ಇನ್ನೊಮ್ಮೆ ಬಾರಲಾರೆಯ ನನ್ನ ಬದುಕಲ್ಲಿ !

ಮುಂದುವರಿಯಲಿದೆ .........
ಉಮಾ ಪ್ರಕಾಶ್ 



































 ಯಾಕೋ ಇತ್ತೀಚಿಗೆ ಮನೆಯ ಮುಂದೆ 'ಬಸವ' ನನ್ನು ಕರೆದು ಕೊಂಡು ಬರುವವರು ಜಾಸ್ತಿ ಆಗ್ತಾ ಇದ್ದಾರೆ.  ನಮ್ಮ ಮನೆ ಮುಂದೆ ಅಂತು ವಾರಕ್ಕೆ ಮೂರು ಬಾರಿ ಒಂದು ಹೆಂಗಸು ತನ್ನ ಪುಟ್ಟ ಹಸುಗೂಸಿನೊಂದಿಗೆ '' ಅಮ್ಮ ತಾಯಿ ಬಸವಣ್ಣ ನಿಗೆ ಏನಾದ್ರೂ ದಾನ ಮಾಡಿ ...... ಅಮ್ಮ.......  ತಾಯಿ............. ಎಂದು ಗಂಟಲು ಹರಿದು ಕೊಳ್ಳುವಂತೆ ಕೂಗ್ತಾ ಇರ್ತಾಳೆ.  ಮುದ್ದಾದ ೨-೩ ವರ್ಷ ವಯಸ್ಸಿನ ಹೆಣ್ಣು ಮಗುವನ್ನು ಕಂಕುಳಲ್ಲಿ ಹೊತ್ತು ಪ್ರತಿ ಮನೆ ಮುಂದೆ ಕೂಗಿ ಅವರು ಕೊಟ್ಟದ್ದನ್ನು ತೆಗೆದು ಕೊಂಡು ಹೇಗೋ ಜೀವನ ಸಾಗಿಸುತ್ತಾಳೆ .  

















Saturday, 23 March 2013

ಬರೆಯೋದು ಒಂದು ಕಲೆ


ಹಾಳೆ - ಒಂದು  :-
 ''ಏನಾದ್ರೂ ಬರೆ ಆದ್ರೆ ಚೆನ್ನಾಗಿ ಬರೆ  ; ಬರೆಯೋದು ಒಂದು ಕಲೆ ''  ಅಂತ ನಮ್ತಂದೆ ನಂಗೆ ಯಾವಾಗಲೂ  ಹೇಳ್ತಿದ್ದರು.  ನನ್ನ ಚೂರು ಪಾರು ಬರವಣಿಗೆಗೆ ನಮ್ತಂದೆ ನನ್ ಬಗ್ಗೆ ತೋರಿಸ್ತಿದ್ದ ಪ್ರೀತಿ, ಮುತುವರ್ಜಿ, ಕಾಳಜಿ, ಅವರು ಹುರಿದುಂಬಿಸುತ್ತಿದ್ದ  ಪರಿ ನಾನು ಬರೆಯುವಾಗಲ್ಲೆಲ್ಲ ಅವರು ನನ್ನೊಂದಿಗೆ ಇದ್ದಾರೆ ಎಂಬ ನನ್ನ ಒಳ ಮನಸ್ಸಿನ ಆ ಚಿಂತನೆಗೆ ನಾನು ಮೆಚ್ಚಲೇ ಬೆಕು.  ಯಾಕೆಂದರೆ ಈಗ ನನ್ನ ತಂದೆ ನಮ್ಮೊo ದಿಗಿಲ್ಲ  ಆದರೂ ಅವರ ಆ ನೆನಪು ನನ್ನ ಬರವಣಿಗೆಗೆ ಈಗಲೂ ತುಂಬಾ ಸಹಾಯಕವಾಗ್ತಾ ಇದೆ.  ನನ್ನನ್ನು ತಿದ್ದಿ ತೀಡಿ ಒಳ್ಳೆ ಸಂಸ್ಕಾರ , ಗುರು ಹಿರಿಯರಲ್ಲಿ ಗೌರವ , ಪ್ರಕೃತಿಯನ್ನು ಪ್ರೀತಿಸುವುದರ  ಜೊತೆ ಜೊತೆಗೆ ಪ್ರಾಣಿ-ಪಕ್ಷಿ ಸಂಕುಲ , ಅದಷ್ಟೇ ಯಾಕೆ ಈ ಇಡಿ ಪ್ರಪಂಚವನ್ನೇ ಪ್ರೀತಿಸುವುದನ್ನು ಹೇಳಿ ಕೊಟ್ಟ ನನ್ನ ಗುರುಗಳು ನಮ್ಮ ತಂದೆಯವರು.  ಅವರ ಬಗ್ಗೆ ಎಷ್ಟು ಹೇಳಿದರೂ ಕಮ್ಮಿ ಅನ್ನಿಸುತ್ತೆ.  ಈ ಲೇಖನವನ್ನು ಬರೆಯಲು ಅವರ ನೆನಪುಗಳೇ ಕಾರಣ.  ನಾನು ಶಾಲೆ, ಕಾಲೇಜ್ ಮ್ಯಾಗಜಿನ್ ಗಳಿಗೆ ಸಣ್ಣ ಕತೆ, ಕವನ ಬರೆಯಲು ಮೂಲ ಕಾರಣ ನನ್ನ ಪ್ರೀತಿಯ ತಂದೆಯವರು .  ನನ್ನ ಪ್ರತಿ ಕತೆ, ಕವನ, ಅವರಿಗೆ ಮೊದಲು ತೋರಿಸಿ ಅವರಿಂದ ತಪ್ಪು - ಒಪ್ಪು ತಿದ್ದಿಸಿ, ಏನಾದ್ರು ಹೊಸ ಪದ ಪುಂಜಗಳು ಬೇಕಿದ್ದ ಪಕ್ಷದಲ್ಲಿ ಅಪ್ಪಾನೆ ನನ್ನ ನಿಘಂಟು; ಅವರಿಂದ ಕೆಲವೊಂದು ಪದಗಳನ್ನು ಸೇರಿಸಿ, ಅದನ್ನು ಮತ್ತೂ ಬೇಕೆಂದರೆ ಮುಂದುವರಿಸಿ ಅದಕ್ಕೆ ಏನಾದ್ರೂ ಮಾಹಿತಿ ಬೇಕಿದ್ರೆ ಲೈಬ್ರರಿಗೆ ಅಪ್ಪನ ಜೊತೆ ಹೋಗಿ ತುಂಬಾ ಕಾದಂಬರಿಗಳನ್ನು ಓಡುತ್ತಿದೆ; ಅಪ್ಪಾನೆ ಒಳ್ಳೊಳ್ಳೆ ಪುಸ್ತಕ  ಹುಡುಕಿ ಕೊಡುತ್ತಿದ್ದರು.   ನನಗೆ ಈಗಲೂ ನೆನಪಿದೆ, ತಂದೆಯವರು ಕೊಡುತ್ತಿದ್ದ ಪುಸ್ತಕ ತ್ರಿವೇಣಿ, ಆರ್ಯಾಂಭ ಪಟ್ಟಾಭಿ ಅವರಿಬ್ಬರೂ ಅಕ್ಕ-ತಂಗಿ ಎಂದು ಹೇಳಿ ಅವರ ಬುಕ್ಸ್ ಹುಡುಕಿ ಹುಡುಕಿ ಓದು ತ್ತಿದ್ದೆ.  ತ್ರಿವೇಣಿಯವರು ಬರೆದ ಮೊದಲ ಕಾದಂಬರಿ ನಾನು ಅತ್ಯಂತ ಆಸಕ್ತಿ ಇಂದ ಮತ್ತೆ ನಾನು ಓದಿದ ಮೊದಲ ಕಾದಂಬರಿ 'ಬೆಕ್ಕಿನ ಕಣ್ಣು' ತುಂಬಾ ಸೊಗಸಾಗಿ ಓದಿಸಿಕೊಂಡು ಹೋದ ಮೊದಲ ಕಾದಂಬರಿ.  ಮೊದಲ ಪುಟದಿಂದ ಕೊನೆಯವರೆಗೂ ತಲೆ ಎತ್ತದೆ ಸಂಪೂರ್ಣ  ಓದಿ ಮುಗಿಸಿದೆ.   ನನ್ನ ಬಾಲ್ಯದಲ್ಲಿ ನಾನ್ಯಾವತ್ತೂ ಮಾರ್ಕೆಟಿಗಾಗಲೀ ಶಾಪಿಂಗ್ ಗಾಗಲೀ  ಹೋಗುವುದು ವಾಡಿಕೆ ಇರಲಿಲ್ಲ ಶಾಲೆ, ಕಾಲೇಜ್, ತಪ್ಪಿದರೆ ಸಿಟಿ ಸೆಂಟ್ರಲ್ ಲೈಬ್ರರಿ .  ನನಗಿನ್ನೂ ಚೆನ್ನಾಗಿ ಜ್ಞಾಪಕ ಇದೆ ; ಶಾಲೆಗೆ ಬೇಸಿಗೆ ರಜ  ಬಂದರೆ ಸಾಕು, ಮನೆಗೆ ಕನ್ನಡ ಪ್ರಭ, ಸುಧಾ, ಪ್ರಜಾಮತ, ಚಂದಮಾಮ , ಗೊಂಬೆ ಮನೆ,  ಮಯೂರ, ತುಷಾರ, ಇನ್ನು ಮುಂತಾದ ದೈಹಿಕ, ಸಾಪ್ತಾಹಿಕ, ಮಾಸಿಕ, ಎಲ್ಲವೂ ಮನೆ ಬಾಗಿಲಿಗೆ ಬರುತ್ತಿದ್ದವು.  ಅಮ್ಮ, ಅಪ್ಪ, ಅಕ್ಕಂದಿರು, ಅಣ್ಣಂದಿರು, ಎಲ್ಲರು ಓದುವ ಗೀಳಿದ್ದವರೇ .  ಎಲ್ಲರೂ  ನಾ ಮುಂಚೆ, ತಾ ಮುಂಚೆ, ಎಂದು ಕಿತ್ತಾದುತ್ತಿದ್ದೆವು  ಮತ್ತು ಆ ಗಲಾಟೆಗೆ ನಮ್ಮಮ್ಮ ಬಂದು ಹೀಗೆ ಹೇಳುತ್ತಿದ್ದರು ' ಅಯ್ಯೋ ಮಕ್ಕಳಾ ಯಾಕ್ಹೀಗೆ ಕಿತ್ತಾಡು ತೀರಾ ? ಮನೇಲೆ ಇರುತ್ತಲ್ಲ ನಿಧಾನ ವಾಗಿ ಓದಿ' ಎಂದರೂ ನಾವುಗಳು ಕಿವಿ ಮೇಲೆ ಹಾಕಿ ಕೊಳ್ಳುತ್ತಿರಲಿಲ್ಲ , ಎಲ್ಲ ಓದಿ ಮುಗಿಸಿ ಮತ್ತೆ ಮನೆ ಸಮೀಪ  ಲೈಬ್ರರಿ ಗೆ ಹೋಗಿ ತುಂಬಾ ಬುಕ್ಸ್ ಓ ದುತ್ತಿದ್ದೆವು.   ನಾನು ಮೊದಲು ಓದಿದ ಒಂದು ಸಣ್ಣ ಕಥೆ 'ರಾ ಜು ಮತ್ತು ಹುರುಳಿ ಬೀಜ' ಅದೆಂತಹ ಕಲ್ಪನೆ ಎಂದರೆ ನನ್ನ ಮನಸ್ಸಿನಲ್ಲಿ ಅಚ್ಚು ಒತ್ತಿದ ಮೊದಲ ಕಥೆ.   ಇದೆಲ್ಲದರ ಪ್ರೇರೇಪಣೆ  ನನಗೆ ಬರೆಯುವ ಹವ್ಯಾಸ ಮೂಡಿ  ಬರಲು ಕಾರಣ ವಾಯಿತು. ಇನ್ನು ಬರೆಯುತ್ತ ಹೋದರೆ ನನ್ನ ಬಾಲ್ಯ , ನನ್ನ ಶಾಲಾ  ದಿನಗಳು, ಎಲ್ಲ ನನ್ನ ಮನಸ್ಸಿನ ತೆರೆ ಮೇಲೆ ಮೂಡಿ ಬರುತ್ತೆ.  ಅದನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಿ.  ಸಮಯ ದೊರೆತಾಗ ಮತ್ತೊಂದಿಷ್ಟು ಬರೆಯುವ ಚಪಲ.  ಅಯ್ಯೋ ಇನ್ನು ಅಡಿಗೆ ಮನೆಯಲ್ಲಿ ತುಂಬಾ ಕೆಲಸ ಬಾಕಿ ಇದೆ :೦  ಮತ್ತೆ ಮುಂದುವರಿಸುತ್ತೇನೆ. 

ಉಮಾ ಪ್ರಕಾಶ್