Saturday, 8 October 2011

ಭಯ

ಭಯ

ತಂದೆ-ತಾಯಿ ಯರಿಗೆ ಜೀವನ ಎದುರಿಸುವ ಭಯ

ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ ಭಯ

ವಾಹನಗಳಲ್ಲಿ ಪ್ರಯಾಣಿಸುವವರಿಗೆ ಅಪಘಾತದ ಭಯ

ಶಿಷ್ಯರಿಗೆ ಗುರುಗಳನ್ನು ಎದುರಿಸುವ ಭಯ

ಶ್ರೀಮಂತರಿಗೆ ಕಳ್ಳ-ಕಾಕರನ್ನು ಎದುರಿಸುವ ಭಯ

ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ನಷ್ಟ ಆದರೆ ಎಂಬ ಭಯ

ಗಂಡನಿಗೆ ಹೆಂಡತಿಯ ಭಯ

ಹೆಂಡತಿಗೆ ಗಂಡನ ಭಯ

ಮಕ್ಕಳಿಗೆ ತಂದೆ-ತಾಯಂದಿರ ಭಯ

ರಾಜಕಾರಣಿಗಳಿಗೆ ತಮ್ಮ ಖುರ್ಚಿಯ ಭಯ !

Friday, 23 September 2011

ಬೀಳ್ಕೊಡುಗೆ



ಹೋಗುವವರೇ ಮರೆಯದಿರಿ ನಮ್ಮನೆಂದೆಂದು, 
ತಿಳಿಯದಿರಿ ನಿಮ್ಮ ಋಣ ತೀರಿತೆಂದೂ 
ಗುರು-ಶಿಷ್ಯರ ಸಂಭಂದವು ಎಂದು ಎಂದೆಂದೂ, 
ಬಿಡಿಸಿಲಾರದಂಥ ಗಂಟು ಎಂದು ಎಂದೆಂದೂ : :

ಬೆಳೆಯುವ ಪೈರು ಮೊಳಕೆಯಲಿ ಎಂಬಂತೆ 
ನೀವೆಲ್ಲ ಮುಂದಿನ ಸತ್ಪ್ರಜೆಯಂತೆ ;
ಶ್ರದ್ದೆಯಿಂದ ಶ್ರಮವಹಿಸಿ ವಿದ್ಯೆ ಗಳಿಸಿರಿ 
ಮುಂದಿನ ಭವಿಷ್ಯಕೆ ಬುನಾದಿ ಹಾಕಿರಿ : :

ಹೋಗುವವರೇ ಮರೆಯದಿರಿ ನಮ್ಮನೆಂದೆಂದು, 
ತಿಳಿಯದಿರಿ ನಿಮ್ಮ ಋಣ ತೀರಿತೆಂದೂ 
ಗುರು-ಶಿಷ್ಯರ ಸಂಭಂದವು ಎಂದು ಎಂದೆಂದೂ, 
ಬಿಡಿಸಿಲಾರದಂಥ ಗಂಟು ಎಂದು ಎಂದೆಂದೂ : :

( ನನ್ನ ನೆಚ್ಚಿನ ೧೦ನೆ ತರಗತಿ ವಿಧ್ಯಾರ್ಥಿ ಗಳಿಗಾಗಿ ನಾನು ರಚಿಸಿ ಹಾಡಿದ್ದು )








 











ದಯಾಮಯ ಭಗವಂತ




ನಾನು ದೇವರನ್ನು  ಭಕ್ತಿ ಇಂದ ಪೂಜಿಸಲು ಪುಷ್ಪವನ್ನು ಬೇಡಿದೆ;
ಅವನೋ ದಯಾಮಯ ದೊಡ್ಡ ಉದ್ಯಾನವನವನ್ನೇ ಕರುಣಿಸಿದ

ನಾನು ಅವನಿಗೆ ಹಣ್ಣುಗಳಿಂದ ನೈವೇದ್ಯ ಮಾಡಲು ಒಂದು ಹಣ್ಣಿನ ಮರವನ್ನು ಬೇಡಿದೆ ;
ಅವನೋ ದಯಾಮಯ ದೊಡ್ಡ ಹಣ್ಣಿನ ತೋಟವನ್ನೇ ದಯಪಾಲಿಸಿದ;

ನಾನು ದೇವರನ್ನು ನನ್ನ ದಾಹ ಇಂಗಿಸಲು ಕುಡಿಯಲು ನೀರು ಬೇಡಿದೆ  ;
ಅವನೋ ದಯಾಮಯ ದೊಡ್ಡ ಸಾಗರವನ್ನೇ ಸೃಷ್ಟಿಸಿದ ;

ನಾನು ದೇವರನ್ನು ನನ್ನ ಹಸಿವು ತಣಿಸಲು ಆಹಾರ  ಬೇಡಿದೆ  ;
ಅವನೋ ದಯಾಮಯ ಪಂಚ ಭಕ್ಷ ಪರಮಾನ್ನ ವನ್ನೇ ನೀಡಿದ

ನಾನು ದೇವರನ್ನು ನನಗೆ ' ತಾಯ್ತನ ' ದಯಾ ಪಾಲಿಸು ಎಂದು ಬೇಡಿದೆ
ಅವನೋ ದಯಾಮಯ ಒಟ್ಟಿಗೆ 'ಅವಳಿ-ಜವಳಿ' ಗಂಡು ಮಕ್ಕಳನ್ನು ಕರುಣಿಸಿ ಹರಸಿದ

ನಾನು ಅವನನ್ನು ಭಕ್ತಿ ಇಂದ ಹಾಡಿ ಹೊಗಳಲು ಒಂದು 'ಭಕ್ತಿ ಗೀತೆ' ಹಾಡಿದೆ
ಅವನೋ ದಯಾಮಯ ನನ್ನನ್ನ ಒಬ್ಬಳು ಒಬ್ಬಳು ಅಪ್ರತಿಮ ಗಾಯಕಿಯನ್ನಾಗಿ ಮಾಡಿದ

ನಾನು ಅವನ್ನನ್ನು ಶ್ರೀ ಹರಿ, ನಾರಾಯಣ , ಪಾಂಡು ರಂಗ,  ರಾಮ, ಕೃಷ್ಣ, ಮುಕುಂದ, ಗೋವಿಂದ
ಎಂದು ಭಜಿಸಲು ಅವನು ನಮಗೆ  ಅರೋಗ್ಯ, ಸಕಲ ಸಂಪತ್ತುಗಳನ್ನೂ ಕರುಣಿಸಿದ
ಅವನೋ ದಯಾಮಯ ಭಗವಂತ ...

Wednesday, 24 August 2011

ಭಾವನೆಗಳು

ಮನದಲಿ ಅರಳುವ ಭಾವನೆಗಳು
ಮುದ ನೀಡುವ ಭಾವನೆಗಳು
ಹಿತ ನೀಡುವ ಭಾವನೆಗಳು
ಕಹಿ ಕಹಿ ಯಾದ  ಭಾವನೆಗಳು
ಸಿಹಿ ಸಿಹಿಯಾದ ಭಾವನೆಗಳು
ಸವಿ ಸವಿಯಾದ ಭಾವನೆಗಳು
ಕೆಲವೊಮ್ಮೆ ಭಾವನೆಗಳು ಅರಳಿ ಪುಷ್ಪಗಳಾಗುತ್ತವೆ
ಕೆಲವೊಮ್ಮೆ ಭಾವನೆಗಳು ಮುದುಡಿದ ತಾವರೆಯಾಗುತ್ತದೆ!!!

Thursday, 28 July 2011

ಅತೃಪ್ತಿ




ಬರೆಯಲು ಕುಳಿತೆನು ನಾನು
ಕಾಗದ ಲೇಖನಿಗಳ ಹುಡುಕಾಟದಲ್ಲಿ
ನನಗೆ ಹೊಳೆದ ಕವನದ ಸಾಲುಗಳೆಲ್ಲ
ಮಂಜಿನಂತೆ ಕರಗಿ ನೀರಾಗಿತ್ತು!!!!!

ಆದರೂ ಛಲ ಬಿಡದ ತ್ರಿವಿಕ್ರಮನಂತೆ
ಬರೆದೆ ಬರೆದೆ ಮತ್ತೂ ಬರೆದೆ ;
ಇನ್ನೂ ಬರೆಯುತ್ತಲಿದ್ದೇನೆ
ಆದರೆ ನನ್ನ ಕವನ ಗಳವೂವೂ
ನನಗೆ ಇನ್ನೂ ತೃಪ್ತಿ ತಂದಿಲ್ಲ!!!!! 

ಹಡೆದಮ್ಮ


'ಅಮ್ಮ' ನೀ ನನ್ನ ಹಡೆದಮ್ಮ
ಅಹುದು ನೀ ನನ್ನ
ನವಮಾಸಗಳು ಹೊತ್ತು ಹೆತ್ತು
ಸಾಕಿ ಸಲಹಿದ ಮಾತೆ !

ನವಮಾಸಗಳು ನಾ ನಿನ್ನ
ಗರ್ಭದಲ್ಲಿ ಹುದುಗಿ
ನಿನ್ನದೇ ತದ್ರೂಪು ಪಡೆದು
ಈ ಜಗಕ್ಕೆ ಅಡಿ ಇಟ್ಟೆ ನಮ್ಮ!

ನಾನೂ ಅಂಬೆಗಾಲಿಟ್ಟು ನಡೆಯುತ್ತಿದ್ದರೆ
ನೀ ನನ್ನ ಬಾಲ ಲೀಲೆಗಳನ್ನು ಕಂಡು
ಅದೆಷ್ಟು ಆನಂದ ಪಟ್ಟೆಯಮ್ಮ?

ನೀನೆನ್ನ ಪ್ರಥಮ ಗುರುವಾಗಿ
ಅಕ್ಷರಾಭ್ಯಾಸ ಕಲಿಸಿದೆ
ವಿದ್ಯೆ ಬುದ್ದಿಯನ್ನು ನೀಡಿ
ನನ್ನನ್ನು ಪದವೀಧರೆಯಾಗಿ ಮಾಡಿ
ನಾನೂ ಸರೀಕರೆದುರು ಘನತೆ-ಗೌರವದಿಂದ
ಬಾಳುವಂತೆ ಮಾಡಿ; ನಿನ್ನ ಈ ದೇಶಕ್ಕೆ
ನೀನು ಒಬ್ಬಳು ಸತ್ಪ್ರಜೆಯನ್ನು
ಉಡುಗೊರೆಯಾಗಿ ಕೊಟ್ಟೆಯಮ್ಮ!

ಹೇ ಮಾತೆ ಮುಂದಿನ ಜನ್ಮವೇನಾದರೂ
ನಾನು ಮತ್ತೆ ಜನ್ಮವೆತ್ತಿದ ಪಕ್ಷದಲ್ಲಿ
ಮತ್ತೆ ನಾನು ನಿನ್ನ ಮಗಳಾಗಿ ಜನಿಸಿ
ನಿನ್ನ ಪ್ರೀತಿಯ ಹೊಳೆಯಲ್ಲಿ
ಮೀಯುವಂತಾಗಬೇಕು
ಎಂಬುದೇ ನನ್ನ ಆಶಯವಮ್ಮ !

'ನಾಳೆ '



'ನಾಳೆ ' ಎಂಬುದು ಹಾಳು
ಸೋಮಾರಿಯಾಗದಿರಿ
ಇಂದಿನದು ಇಂದಿಗೆ
ನಾಳೆ ಎಂದೆನ್ನದಿರಿ !

ಇಂದಿನದು ಎಂದರೆ
ಈ ಘಳಿಗೆಯ ಕೆಲಸ
ಆ ಕ್ಷಣವೇ ಮಾಡಿದಿರೋ
ಬದುಕು ಸರಸ
ಇಲ್ಲವೇ ನೀರಸ !

ನಾಳೆ ಎಂಬುದೊಂದು
ದೊಡ್ಡ ಬ್ರಹ್ಮ ರಾಕ್ಷಸ
ಅದರ ಕೈಗೆನಾದರೂ
ನಿಮ್ಮ ಕೆಲಸ ಒಪ್ಪಿಸಿದಿರೋ ಜೋಕೆ !
ಅದರ ವಜ್ರ ಮುಷ್ಟಿಗೆ ಸಿಲುಕಿ
ನಿಮ್ಮ ಕೆಲಸ ಮುಂದುವರಿಯದೇ
ಹಾಗೆ ಉಳಿದು ಬಿಡುತ್ತದೆ !

ನಾಳೆ ಎಂಬುದರ ವಿನಾಶವೇ
ಇಂದು ನಮ್ಮೆಲ್ಲರ ಬಾಳಿಗೆ ಅತಿಶಯವೇ !


Wednesday, 27 July 2011

ಪ್ರೀತಿ




ಎಲ್ಲರನ್ನು ಪ್ರೀತಿ ಇಂದ ಕಾಣಿರಿ
ಎಲ್ಲರೂ ನಿಮ್ಮನ್ನು ಪ್ರೀತಿಸುವರು
ಖಗ-ಮೃಗ, ಪ್ರಾಣಿ-ಪಕ್ಷಿ ಗಳನ್ನೂ ಪ್ರೀತಿಸಿ
ಎಲ್ಲರ ಮೆಚ್ಚಿಗೆ ಪ್ರೀತಿಯೇ
ನಿಮ್ಮ ಜೀವನದ ಹಾದಿಗೆ ಬೆಳಕು :
ನಿಮ್ಮ ನಗು ಮುಖವೇ ನಿಮಗೆ ಶ್ರೀ ರಕ್ಷೆ
ನಿಮ್ಮ ಸೊರಗಿದ ಗಂಟು ಹಾಕಿದ ಮುಖವೇ
ನಿಮ್ಮ ನಾಶದ ನಿರೀಕ್ಷೆ !
ಕಷ್ಟವೇನೆ ಇರಲಿ ಬಾಳಿ ಮರೆತು
ಸಾಧಿಸಲು ಯತ್ನಿಸಿ ಏನಾದರು ಮತ್ತೂ :
ಕೊರಗಿ ಮರುಗದಿರಿ
ಮರುಗಿ ಸೊರಗದಿರಿ

ಸೊರಗಿ ಕೃಶವಾಗದಿರಿ
ಎಲ್ಲರನ್ನು ಪ್ರೀತಿ ಇಂದ ಕಾಣಿರಿ

ಕಲಿಗಾಲ




ಪ್ರಪಂಚವೆಂಬ ಸಂತೆಯಲ್ಲಿ
ಲಂಚಕೋರರ ಕಳ್ಳ ಸಂತೆಯಲ್ಲಿ
ಗೋಮುಖ ವ್ಯಾಘ್ರರಂತಿಲ್ಲಿ
ಮುಖವಾಡವ ಧರಿಸಿದರಿಲ್ಲಿ
ಬಾಳುವಿರಿ ಹಾಯಾಗಿ ನೀವಿಲ್ಲಿ :
ನ್ಯಾಯಕ್ಕೆ ಕಾಲವಲ್ಲವಿ ಕಲಿಗಾಲವು
ಅನ್ಯಾಯಕಿಹ ಬೆಲೆ ನ್ಯಾಯಕ್ಕಿಲ್ಲವು;
ಸತ್ಯ ಧರ್ಮ ನ್ಯಾಯಗಳೆಲ್ಲ
ಗೋಮುಖ ವ್ಯಾಘ್ರರ ಕಾಲ ಮೆಟ್ಟುಗಲಾಗಿಹವು 
ಅಂದು ಪುಣ್ಯಕೋಟಿ ನುಡಿಯಿತು
ಸತ್ಯವೇ ನಮ್ಮ ತಾಯಿ -ತಂದೆ
ಬಂಧು-ಬಳಗ ಸಕಲವೂ ಎಂದು
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಪರಮಾತ್ಮ ಮೆಚ್ಚನೆಂದು
ಪುಣ್ಯಕೋಟಿಯ ಮಾತು ಕೇಳಿ
ಅದರ ಸತ್ಯ ಸಂಧತೆಗೆ ಮೆಚ್ಚಿ
ಹುಲಿಯೇ ಪ್ರಾಣಾರ್ಪಣೆ ಮಾಡಿಕೊಂಡಿತು
ಆದರಿಂದು ಪುಣ್ಯ ಕೋಟಿಯಂಥ 
ಸತ್ಯ ಸಂಧರಿಗೆ ಸಿಗುತಿರುವ ಬೆಲೆ ?

ಬಡಪಾಯಿ

ಬಡಪಾಯಿ ನಾನು ಏನ ಮಾಡಲಿ ?




 ಸಿಡಿದು ನಿಂತಿಹೆ ನಾನು
ಸರ್ಕಾರದ ಕಾನೂನಿನ ರೀತಿಯ ಕಂಡು
ಅದರೆನೂ ಮಾಡೆನು ನಾನೆನನ್ನು ಇಂದು

ಬಡವರನು ತುಳಿದು ನಿಂತಿಹ ಓ ನಿರ್ಧಯಿ ಸರ್ಕಾರವೇ
ನಲುಗಿಹರು ಅವರು ನಿನ್ನ ಅಲುಗಿನ ಇರಿತಕ್ಕೆ
ಏರಿಸಿರುವೆ ಬೆಲೆಗಳನು ಎವೆರೆಸ್ಟ್ ಶಿಖರದಂತೆ
ಹತ್ತಲಾರರು ಬಡವರು ತೆನಸಿಂಗನಂತೆ

ಇದ ಕಂಡು ನಾನು ಸಿಡಿದು ನಿಂತರೆ
ಈ ಬಡಪಾಯಿಗೆ ಬೆಂಬಲ ಸಿಗುವುದೇ?
ಬಡವಿ ನೀನ್ ಮಾಡಗ್ದೊಂಗೆ ಇರು 

ಅಂತ ದೊಡ್ಡವರ ಮಾತು!!!!

ಕಲ್ಪನಾಲಹರಿ



ನಾನೊಂದು ಎಣಿಸಿದರೆ ದೈವದೆಣಿಕೆ ಬೇರೆಯೇ ಆಗಿತ್ತು!
ನನ್ನೆಣಿಕೆ ಹೀಗಿತ್ತು!
ನಾನೂ ನಾಟ್ಯ ರಾಣಿ ಶಾಂತಲೆ ಯಂತಾಗಬೇಕು
...ಗೆಜ್ಜೆ ಕಟ್ಟಿ ಕೊಂಡು ನವಿಲಿನಂತೆ ನರ್ತಿಸಿ
ಪ್ರೇಕ್ಷಕರಿಂದ ಬಿರುದು ಬಾವಲಿಗಳನ್ನು ಪಡೆದು
ಅವರ ಹೃನ್ಮನ ಗಳನ್ನೂ ಸೂರೆ ಗೊಳ್ಳಬೇಕು ಎಂದಿದ್ದೆ
ಆದರೆ ನನ್ನೆಣಿಕೆ ಹುಸಿಯಾಯಿತು !
ನಾನೂ ಶ್ರೇಷ್ಠ ಲೇಖಕಿ ತ್ರಿವೇಣಿ ಯವರಂತೆ ಆಗಬೇಕು
ಕಥೆ ಕಾದಂಬರಿ ಗಳನ್ನೂ ರಚಿಸಿ
ಓದುಗರನ್ನು ನನ್ನ ಕಲ್ಪನೆಯ ಕಡಲಲ್ಲಿ ಮುಳುಗಿಸಿ
ಅವರ ಹೃನ್ಮನ ಗಳನ್ನೂ ಸೂರೆ ಗೊಳ್ಳಬೇಕು ಎಂದಿದ್ದೆ
ಆದರೆ ನನ್ನೆಣಿಕೆ ಹುಸಿಯಾಯಿತು !
ನಾನೂ ಗಾಯನ ವಿಧೂಷಿ ಎಂ ಎಸ್ ಸುಬ್ಬಲಕ್ಷ್ಮಿ ಯವರಂತೆ ಆಗಬೇಕು
ನನ್ನ ಇನಿದಾದ ಕಂಠ ದಿಂದ ಹಾಡಿ
ಕೇಳುಗರನ್ನು ನನ್ನ ಸಂಗೀತದ ಸರೋವರದಲ್ಲಿ ತೇಲಿಸಿ
ಅವರ ಹೃನ್ಮನ ಗಳನ್ನೂ ಸೂರೆ ಗೊಳ್ಳಬೇಕು ಎಂದಿದ್ದೆ
ಆದರೆ ನನ್ನೆಣಿಕೆ ಹುಸಿಯಾಯಿತು !
 

ಭೂದೇವಿಗೆ ನನ್ನ ನಮನ

'ಭೂದೇವಿ ನೀನು ಕ್ಷಮಯಾಧರಿತ್ರಿ '



ಕೋಟಿ ಕೋಟಿ ಜೀವಿಗಳ ಹೊತ್ತು ನಿಂತಿಹ ಭೂದೇವಿಯೇ
ನೀನೇನೋ ಕ್ಷಮಯಾಧರಿತ್ರಿ
ನಿನ್ನ ತಾಳ್ಮೆಗೆ ಸರಿಯಲ್ಲ ಈ ಇಳೆಯು
ಪಾಪಿ ಮನುಜರ ಪಾಪದ ಕೊಡ ತುಂಬಿ ತುಳುಕುತಿದೆ:

ನೀನೇನೋ ಕ್ಷಮಯಾಧರಿತ್ರಿ ಎಂದು
ಮಾಡುವುದೇ ಪಾಪವ ಇಷ್ಟೊಂದು?
ತಾವೇನು ಮದುಥಿರುವೆವು ಎಂಬ ಅರಿವು
ಈ ಪಾಪಿ ಮನುಜರಿಗೆ ಇಲ್ಲವು !

ಮೂಕ ಪ್ರಾಣಿಗಳಿಗೆ ಕೊಡುವ ಹಿಂಸೆ ಏನು
ದೀನ ದಲಿತರಿಗೆ ಕೊಡುವ ನೋವೇನು ?
ಮೇಲು ಕೀಳು ಎಂಬ ಭೇದವೇನು?
ನಾನು ತಾನು ಎಂಬ ಅಹಂ ಏನು?
ಅವರ ತಪ್ಪಿಗೆ ಶಿಕ್ಷೆಯೇ ಇಲ್ಲವೇ?

ನೀನೇನೋ ಕ್ಷಮಯಾಧರಿತ್ರಿ ಎಂದು
ಮಾಡುವುದೇ ಪಾಪವ ಇಷ್ಟೊಂದು?
ನಿನ್ನ ತಾಳ್ಮೆಗೆ ಸರಿಯಲ್ಲ ಈ ಇಳೆಯು
ಹೇ ಭೂದೇವಿ ನಿನಗೆ ಇದೋ ನನ್ನ ನಮನ
 

ಹಿರಿಯ ತಾತ




ಕೊಕೊಕೋ ಕೋಳಿಯ ಕೂಗು ಎಚ್ಚರಿಸಿದರೂ
ಹಕ್ಕಿಗಳ ಚಿಲಿ ಪಿಲಿ ಕಲರವ ಕಿವಿಗೆ ಬಿದ್ದರೂ
ಬೆಡ್ ಕಾಫಿ ಸಿಗುವ ತನಕ ಏಳುವುದೇ ಇಲ್ಲ ಇವನು
ಊರಿಗೆಲ್ಲ ತಾತ ಬಲು ಹಿರಿಯ ತಾತ ಇವನು :

ತಾತ ನಾಡುವ ಮಾತು ಕೇಸರಿ ಬಾತಿ ನಷ್ಟೇ ಸಿಹಿ ಎಂದು
ಬಾಯಿತುಂಬ ಹೊಗಳುವರು ಊರಿನವವರು ಎಂದೂ
'ರೈಲು' ಬಿಡುವೆನೆಂದು 'ಸ್ಮೈಲು' ಮಾಡುವ ತಾತನಿಗೆ
ಅರೆಬರೆ ಇಂಗ್ಲಿಷ್ ಬಂದರೂ ಇವನ ಮಾತು ಕೇಳಿ ನಗುವರೆಲ್ಲರು 


ಕೈಲಿ ನಶ್ಯದ ಸೀಸೆ , ತಾಂಬೂಲ ಮೆಲುವಾಸೆ
ನಾಟಕ-ಯಕ್ಷಗಾನ ಎಂಬ ಹುಚ್ಚಾಸೆ ಇವನಿಗೆ
ಅರೋಗ್ಯ ಸರಿ ಇಲ್ಲ ತಾತನಿಗೆ ಇತ್ತಿಚ್ಚೆಗೆ
ಆದರೂ ಊರೆಲ್ಲ ಸುತ್ತಾಟ ಇವನಿಗೆ : 


ಮುಖದಲ್ಲಿ ಗೆಲುವಿದೆ ; ಮಂದಹಾಸದ ನಗುವಿದೆ
ನುಡಿದಂತೆ ನಡೆಯುವ , ಮಕ್ಕಳನು ನಗಿಸುವ
ಕೈಲಿ ದಿನ ಪತ್ರಿಕೆ ಹಿಡಿದು ಓದುತ್ತಲಿರುವ
ಊರಿನವರಿಗೆಲ್ಲ ಪ್ರಿಯನಾದ ಬಲು ಹಿರಿಯ ತಾತ ಇವನು : 

ಕಾಫಿ ................

 

ಕಾಫಿ ಮಾಡಿರಿ ತಂದು ನೀಡಿರಿ
ನಮ್ಮ ಉದಾರವ ಸೇರಲಿ
ಕಾಫಿಗಾಗಿಯೇ ತೊಳಲಿ ಬಳಲುವ
ನಮ್ಮ ತಹಗುದಿ ಆರಲಿ : 
ದೊಡ್ಡ ಬಟ್ಟಲು ಹಿಡಿದು ಕೈಯಲಿ
ಬಿಸಿಯ ಕಾಫಿಯ ಆರಿಸಿ
ಗುಟುಕು ಗುಟುಕಾಗಿ ಇಳಿಸಿ ಗಂಟಲಿಗೆ
ತನುವ ಸುಧಾರಿಸಿ ಹರ್ಷಿಸಿ :
ದೂರದಿಂದಲಿ ತೇಲಿ ಬರುವ
ಕಾಫಿ ಸುವಾಸನೆಯ ಹೀರಿರಿ
ಸರ್ವರನು ಮರಳುಗೊಲಿಸೋ
ದೇವಲೋಕದ ಸುಧೆಯಿದು
ದೇವಲೋಕದಿಂದ ಧರೆಗಿಳಿದ
ದಿವ್ಯಕರದ ಮಧುವಿದು
ಸರ್ವ ಕಾಲಕು ಸರ್ವ ಕೆಲಸಕು
ಸರ್ವರಿಗೂ ಸ್ಪೂರ್ತಿಕಾರಿಯು
ಈ ಕಾಫಿಯು  :
ವಿಶ್ವತೋಮುಖವಾಗಿ ಹರಡಿದೆ
ವಿಶ್ವರೂಪಿ ಈ ಕಾಫಿಯು
ವಿಶ್ವದಲ್ಲೆಲ್ಲ ಇನ್ಸ್ಟಂಟ್ ಕಾಫಿಯು
ಈ ಧಿಡೀರ್ ಜನಪ್ರಿಯ ಕಾಫಿಯು :

ಪ್ರಕೃತಿ

'ಹಸಿರ ಹಾದಿ- ಪ್ರಕೃತಿಯ ತಂಪನೆ ಹಾಸಿಗೆ '



ನಾನೊಬ್ಬಳು ಸೌನ್ದರ್ಯೋಪಾಸಕಿ
ಪ್ರಕೃತಿಯ ಸೌಂದರ್ಯ ಸವಿಯುವ
ಸವಿಯ ಬಯಸುವ ಕಲೋಪಾಸಕಿ
ಪ್ರಕೃತಿಯ ತಂಪನೆ ಮಡಿಲು
ತಾಯಿಯ ಪ್ರೇಮದ ಒಡಲು
ಜೀವನದಿ ಇನ್ನೇನು ಬೇಕು
ಪ್ರಕೃತಿಯ ಸವಿಯೊಂದಿರಲು?
ಪ್ರಕೃತಿಯ ಹಚ್ಚನೆ ಹಸಿರು
ನನ್ನ ಬಾಳಿಗೆ ಪ್ರೀತಿಯ ಉಸಿರು
ಪ್ರಕೃತಿಯ ಸೌಂದರ್ಯವನ್ನು
ಸವಿದಷ್ಟೂ ನನ್ನ ಹಸಿವು ತನಿಯುವುದಿಲ್ಲ!

ಸುಖಬಾಳ್ವೆಗೆ ಕಿವಿಮಾತು




ಬಾಳಿ ಬದುಕಬೇಕೆಂಬಾಸೆ ಇದ್ದಲ್ಲಿ
ಹೂಡಿರಿ ಮೋಸದ ತಂತ್ರವ
ಆಗ ನೋಡಿರಿ ನಿಮ್ಮ ಕಷ್ಟಗಳೆಲ್ಲ
ಮಂಜಿನಂತೆ ಕರಗಿ ಹೋಗುತ್ತದೆ !
ಸತ್ಯಹರಿಶ್ಚಂದ್ರನಂತೆ ನಡೆದಿರೋ
ಸತ್ಯಕ್ಕೆ ಬೆಲೆ ಇಲ್ಲವಿಲ್ಲಿ
ಗಾಂಧಿ ಮಹಾತ್ಮಾ ನಂತಾದಿರೋ
ಅಹಿಂಸೆಗೆ ನೆಲೆ ಇಲ್ಲವಿಲ್ಲಿ !
ನ್ಯಾಯಾ ನೀತಿಯ ದಾರಿಯಲ್ಲಿ
ನಡೆದರೆ ನಿಮಗೆ ಕಷ್ಟ-ನಷ್ಟಗಳೇ ಹೆಚ್ಚು
ಮೋಸ ಅಧರ್ಮದಿಂದ ನಡೆದರೆ
ಸುಳ್ಳಿನ ಸರಪಣಿಯ ಹೆಣೆದರೆ
ನೀವೂ ರಾಜ ರೋಷದಿಂದ
ಬದುಕು ನಡೆಸಬಹುದು !

ಹೆಣ್ಣು

ಹೆಣ್ಣು ಹೆಣ್ಣು ಎಂದೇಕೆ ಜರಿಯುವಿರಿ ?



ಹೆಣ್ಣು ಮಾಯೆಯೆ ?
ಜನಿಸುವ ಮೊದಲು ಹೆಣ್ಣಿನ ಒಡಲು
ಜನಿಸಿದ ಮೇಲೆ ಹೆಣ್ಣಿನ ಮಡಿಲು
ಗುರುವಾಗಿ ತಾಯಿ ಮೊದಲು
ವಿವಾಹದ ನಂತರ ಹೆಣ್ಣಿನ ತೊಲೋಳು
ವಯಸಾದ ನಂತರ ಹೆಣ್ಣಿನ ಹೆಗಲು
ಪ್ರತಿ ಹಂತದಲ್ಲೂ ನಿಮಗಿರೆ ಹೆಣ್ಣಿನ ಆಸರೆ
ಹೆಣ್ಣು ಹೆಣ್ಣು ಎಂದೇಕೆ ಜರಿಯುವಿರೆ
ಹೆಣ್ಣು ಮಾಯೆಯಲ್ಲ ಅಲ್ಲವೇ ?
 

ಅವಳಿ ಪದಗಳು





ಕನಸು-ನನಸುಗಳೆರಡು 
ನಮ್ಮೊಟ್ಟಿಗೆ ಇರಲಿ
ಪ್ರೀತಿ-ಪ್ರೆeಮವೆರಡೂ
ನಮ್ಮೊಟ್ಟಿಗೆ ಇರಲಿ
ಸುಖ-ಸಂತೋಷಗಳೆರಡು ನಮ್ಮೊಟ್ಟಿಗೆ ಇರಲಿ
ಸ್ನೇಹ-ಪ್ರೀತಿಗಳೆರಡು ನಮ್ಮೊಟ್ಟಿಗೆ ಇರಲಿ
ಬಂಧು-ಬಂಧವರೆಲ್ಲರೂ  

ನಮ್ಮೊಟ್ಟಿಗೆ ಇರಲಿ   
ಕಷ್ಟ-ಸುಖಗಳೆರಡು
ನಮ್ಮೊಟ್ಟಿಗೆ ಇರಲಿ 
ನೋವು-ನಲಿವುಗಳೆರಡು ನಮ್ಮೊಟ್ಟಿಗೆ ಇರಲಿ
ಭರವಸೆ-ಆತ್ಮ ವಿಶ್ವಾಸ
ಗಳೆರಡು ನಮ್ಮೊಟ್ಟಿಗೆ ಇರಲಿ
ಈ ಅವಳಿಗಳೊಂದಿಗೆ ಸಮರಸದ ಬದುಕು 

ನಮ್ಮೊಟ್ಟಿಗೆ ಇರಲಿ

ಅಂತೆ - ಕಂತೆ





ಈ ಜಗವು ಒಂದು ನಾಟಕ ರಂಗವಂತೆ
ನಾವೆಲ್ಲಾ ಇಲ್ಲಿ ಪಾತ್ರಧಾರಿಗಳಂತೆ
ಪಾತ್ರ ನಿರ್ವಹಿಸುವ ರಂಗಸ್ಥಳವಿದಂತೆ
ನಾವೆಲ್ಲಾ ಬಣ್ಣ ಹಚ್ಚ ಬೇಕಂತೆ :
ನಮ್ಮ ನಮ್ಮ ಪಾತ್ರವ ಕಾಯಬೇಕಂತೆ
ನಮ್ಮ ಪಾತ್ರ ಬಂದಾಗ
ನಿರ್ವಹಿಸಬೇಕಂತೆ
ನೈಜ್ಯತೆ ಎದ್ದು ಕಾಣುತಿರಬೇಕಂತೆ
ನಾಟಕೀಯತೆಯ ಸೋಗು ಬೇಡವಂತೆ :
ಹೇಳುವವ ಮಾಡಿಸುತಾನಂತೆ
ಕೇಳಿಸಿಕೊಂಡವ ನಡೆಸುತಾನಂತೆ
ಪುರಾಣ ಹೇಳುವುದಕಂತೆ
ಬದನೆ ಕಾಯಿ ತಿನ್ನುವುದಕಂತೆ !

ತ್ಯಾಗಮಯಿ ತಾಯೀ !!!




ತಾಯಿಯ ಗರ್ಭದಲ್ಲಿ ಇರುವ ಮಗುವಿನ
ನಿರೀಕ್ಷೆಯಲ್ಲಿ ತಾಯಿ ಕಾತುರದಿಂದ
ಕಾದೂ ಕಾದೂ ನವಮಾಸಗಳು
ತುಂಬುವುದನ್ನೇ ಎದಿರು ನೋಡುತ್ತಾಳೆ
ತನ್ನ ಮುದ್ದು ಮಗು ಈ ಲೋಕಕ್ಕೆ
ಅಡಿ ಇಡುತ್ತಲೇ ತಾನು ಒಂಭತ್ತು ತಿಂಗಳು
ಪಟ್ಟ ನೋವು, ಯಾತನೆ ಎಲ್ಲವನ್ನು
ಮರೆತು ಆ ಪುಟ್ಟ ಕೂಸಿನ
ಆರೈಕೆ, ಅದಕ್ಕೆ ತಿನ್ನಿಸುವುದು
ಉನ್ನಿಸುವುದೇ ಅವಳ ಸುಖ-ಸಂತೋಷ
ಅದೇ ತನ್ನ ಪ್ರಪಂಚ ಎಂದು
ತನ್ನೆಲ್ಲ ನೋವಿನಲೂ
ನಗು ನಗುತ ಮಗುವನ್ನು
ಸಾಕಿ ಸಲಹುವ ತಾಯಿ !
ಲಾಲಿ ಹಾಡಿ ಮಲಗಿಸುವ ತಾಯಿ !
ಮಗುವಿನ ಬೆಳವಣಿಗೆ ನೋಡಿ
ಹಿಗ್ಗಿ ಹಿಗ್ಗಿ ಹೀರೆಕಾಯಿ ಆಗುತ್ತಾಳೆ !!!
ತಾಯಿ ತಾಯಿ ಹೊರುವಳು ಮಗುವಿನ ಭಾರ
ತಾಯಿ ತಾಯಿ ಹರಸುವಳು ಮಕ್ಕಲ್ಲನ್ನೆಲ್ಲ
ತ್ಯಾಗಮಯಿ ತಾಯೀ !!!

ದೇವರ ಇರುವಿಕೆ !!!


ದೇವರೇ ನೀನು ಇರುವೆ
ಇರುವೆ ನೀನು ಎಲ್ಲೆಲ್ಲು ಇರುವೆ
ಎಲ್ಲೆಲ್ಲು ಇರುವೆ ನೀನು
ಇರುವೆಯಲ್ಲೂ ಇರುವೆ
ಇರುವೆಯಲ್ಲೂ ಇರುವೆ ನೀನು
ನನ್ನಲ್ಲೂ ಇರುವೆ
ನನ್ನಲ್ಲೂ ಇರುವೆ  ನೀನು
ಈರೇಳು ಲೋಕದಲ್ಲೂ ಇರುವೆ
ಈರೇಳು ಲೋಕಾಗಲ್ಲಲ್ಲೂ ಇರುವೆ ನೀನು
ಸಕಲ ಚರಾಚರದಲ್ಲೂ ಇರುವೆ!!
ದೇವರೇ ನೀನು ಇರುವೆ !!!

ಸಮಯೋಚಿತೆ


ಕನ್ನಡದ ಅಭಿಮಾನಿ ಉಮಾ ಪ್ರಕಾಶ್ .




ನಾನೊಬ್ಬಳು ಕನ್ನಡಾಭಿಮಾನಿ
ಹಾಗೆಂದ ಮಾತ್ರಕ್ಕೆ
ನಾನೇನು ಅನ್ಯ ಭಾಷಾ ವಿರೋಧಿಯಲ್ಲ!
ಆದರೂ ಸ್ನೇಹಿತರೆಲ್ಲ ಕೇಳುತ್ತಾರೆ
ನೀವ್ಯಾಕೆ ಅನ್ಯ ಭಾಷೆ
ಬಳಸುವುದಿಲ್ಲ ಎಂದು;
ಆದರೆ ನನ್ನ ಉತ್ತರ ಬಲ್ಲಿರಾ?
ಬಳಸುತ್ತೇನೆ ಆದರೆ ಮಿತವಾಗಿ ;
ಸಮಯೋಚಿತವಾಗಿ!
ಈ ಕನ್ನಡಾಭಿಮಾನಿಯ
ಉತ್ತರ ಸರಿ ಅಲ್ಲವೇ?

Tuesday, 26 July 2011

'ಅರ್ಥ' ಪೂರ್ಣ




ಒಬ್ಬ ಭಾರಿ ವಿಚಾರವಾದಿ
ಪ್ರತಿಯೊಂದು ಮದುವೆ ಸಮಾರಂಭಕ್ಕೆ ಹೋದಾಗಲೂ
 "ಮದುವೆಗಳು ಅರ್ಥ ಪೂರ್ಣವಾಗಿರಬೇಕು"
"ಮದುವೆಗಳು ಅರ್ಥ ಪೂರ್ಣವಾಗಿರಬೇಕು"

ಎಂದು ಬಡಾಯಿ ಕೊಚ್ಚುತ್ತಿದ್ದ ^^ :)
ಆದರೆ ಆತ ತನ್ನ ಮದುವೆಯಲ್ಲಿ
'ಅರ್ಥ' ಪೂರ್ಣವಾಗಿ ಬಂದ ಮೇಲೆ
ವಧುವಿನ ಕೊರಳಿಗೆ ತಾಳಿ ಕಟ್ಟಿದನಂತೆ!!!
'ಅರ್ಥ' ವಾಯಿತಾ?


ಸಾಧನೆ



'ಹುಟ್ಟು' ಹಾಗೂ 'ಸಾವು'
ಇವುಗಳ ನಡುವಿನ ಅಂತರ 'ಜೀವನ'
ಈ ಜೀವನ ಎಂಬ ಸಾಗರವನ್ನು ಈಜಿ
ದಡ ಸೇರಬೇಕಾದರೆ ನಾವು
... ಏನ್ನನ್ನಾದರೂ ಸಾಧಿಸ ಬೇಕಲ್ಲವೇ?
'ಸಾಧನೆ' ಇರದ ಬದುಕು
ಬಂಜರು ಭೂಮಿಗಿಂತ ಕೀಳು
ಆದುದರಿಂದಲೇ ಅಲ್ಲವೇ ದಾಸರು ಹೇಳಿರುವುದು
'ಮಾನವ ಜನ್ಮ ದೊಡ್ಡದು
ಅದ ಹಾಳು ಮಾಡಬೇಡಿ
ಹುಚ್ಚಪ್ಪಗಳಿರಾ' ಎಂದು !

ಚಪಲ

 ಕುರುಡನಿಗೆ ಕಣ್ಣಲ್ಲೇ ಇಡೀ ಸೃಷ್ಟಿಯನ್ನು ಅಳೆಯುವ  ಚಪಲ
 ಕುಂಟನಿಗೆ ಕುಳಿತಲ್ಲೇ ಇಡೀ ಭೂ ಮಂಡಲವನ್ನು ಸುತ್ತಿ ಬರುವ ಚಪಲ
 ಕಿವುಡನಿಗೆ ಸಂಗೀತ ಆಲಿಸಿ ನಲಿಯುವ ಚಪಲ
 ಮೂಗನಿಗೆ ಎಲ್ಲರನ್ನು ಮಾತಾಡಿಸುವ ಚಪಲ
 ಇವರನ್ನೆಲ್ಲ ಸೃಷ್ಟಿಸಿದ ಹೇ ದೇವ ಇದೇನು ನಿನ್ನ ಲೀಲಾ ?

ಪ್ರಳಯ

ಪ್ರಳಯ! ಪ್ರಳಯ!  ಪ್ರಳಯ!  
ವಿಶ್ವದ ಎಲ್ಲೆಡೆಯಲ್ಲೂ ಗುಲ್ಲೋ ಗುಲ್ಲು
೨೦೧೨ ಡಿಸೆಂಬರ್ ೨೧ ರಂದು
ಜಗತ್ತಿನ ಅಂತ್ಯ ವಂತೆ
ಕಲ್ಲು ಕೋಳಿ ಕೂಗುತ್ತದಂತೆ
ಬೆಂಕಿ ಮಳೆ ಬೀಳುತ್ತಂತೆ
ಕಲ್ಲಿನ ಬಸವ ಎದ್ದು ನಡೆಯುತ್ತಂತೆ

ನೋಡ ಬಾರದ್ದು , ಕೇಳ ಬಾರದ್ದು , ಕಾಣ ಬಾರದ್ದು 
ನಡೆಯುವ ಸಂಭವ ಇದೆಯಂತೆ, 
ವಿಶ್ವವೆಲ್ಲ ಅಂಧಕಾರದಲ್ಲಿ
ಮುಳುಗಿ ಹೋಗುತ್ತದಂತೆ !!!!!
ಪ್ರಳಯ! ಪ್ರಳಯ!  ಪ್ರಳಯ!
ಅಗಲಿ ಪ್ರಳಯ; ಏನಂತೆ ನಷ್ಟ
ಭೂ ಭಾರ ಕಳೆದು
ಭೂ ತಾಯಿಗೆ ಕಳೆಯಿತು ಅನಿಷ್ಟ

ನೀನು

      

ನೀನೆಂಬುದು ನೀನಲ್ಲ
ನಿನ್ನ ಈ ಶರೀರ ನಿನ್ನದಲ್ಲ
ನೋಡಿಕೋ ನಿನ್ನ ನೀ
ನಿನ್ನ ನಿರ್ಮಲ ಮನಸ್ಸಿನಲ್ಲಿ
ನಿನ್ನ ಪ್ರೀತಿ ವಿಶ್ವಾಸ ಗಳಲ್ಲಿ
ನಿನ್ನ ಮಂದಹಾಸದ  ಮುಗುಳ್ ನಗುವಿನಲ್ಲಿ
ನಿನ್ನ ನೋವು-ನಲಿವಿನಲ್ಲಿ,
ನಿನ್ನ ತ್ಯಾಗದಲ್ಲಿ, ನಿನ್ನ ಸ್ನೇಹದಲ್ಲಿ,
ನಿನ್ನ ಗಾನದಲ್ಲಿ, ನಿನ್ನ ನಾಟ್ಯದಲ್ಲಿ,
ನಿನ್ನ ಸತ್ಯ-ಧರ್ಮಗಳಲ್ಲಿ
ನಿನ್ನ ಮಾನವತ್ವದ
ಒಂದೊಂದು ಹೆಜ್ಜೆಯಲ್ಲಿ !